ಸತತ ಮೂರು ದಿನ ರಜೆಯಿದ್ದರೂ ಕಾರವಾರದಲ್ಲಿ ಪ್ರವಾಸಿಗರ ಕೊರತೆ!

KannadaprabhaNewsNetwork | Updated : Jan 14 2024, 01:23 PM IST

ಸಾರಾಂಶ

ಹೊಸ ವರ್ಷಕ್ಕೆ ಆಗಮಿಸಿದ್ದ ಕಾರಣವೂ ಪ್ರಸಕ್ತ ರಜೆಯಲ್ಲಿ ಜನರು ಇಳಿಕೆಯಾಗಲು ಕಾರಣವಾಗಿದೆ. ಗೋಕರ್ಣ, ಮುರುಡೇಶ್ವರದ ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಖಾಲಿ ಖಾಲಿ ಇರುವಂತೆ ಭಾಸವಾಗುತ್ತಿದೆ

ಕಾರವಾರ: ಸತತ ಮೂರು ದಿನ ರಜೆ ಬಂದಿದ್ದರೂ ಈ ಬಾರಿ ಜಿಲ್ಲೆಗೆ ಪ್ರವಾಸಿಗರ ಆಗಮನ ಗಣನೀಯವಾಗಿ ಇಳಿಕೆಯಾಗಿದೆ. ಕಡಲ ತೀರ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಶನಿವಾರ ಕಡಿಮೆಯಿತ್ತು.

೨ನೇ ಶನಿವಾರ, ಭಾನುವಾರದ ರಜೆಯೊಂದಿಗೆ ಸೋಮವಾರ ಸಂಕ್ರಾಂತಿ ಹಬ್ಬದ ರಜೆಯಿದ್ದು, ಆದರೆ ಪ್ರವಾಸಿಗರು ನಿರೀಕ್ಷೆಯಷ್ಟು ಆಗಮಿಸಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭವಾಗಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿರುತ್ತವೆ. 

ಹೀಗಾಗಿ ಪಾಲಕರು ಪ್ರವಾಸಿ ತಾಣಗಳಿಗೆ ತೆರಳಲು ಮುಂದಾಗಿಲ್ಲ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಕ್ರಾಂತಿ ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕಾರಣ ಸತತ ಮೂರು ದಿನಗಳ ಕಾಲ ರಜೆಯಿದ್ದರೂ ಪ್ರವಾಸಕ್ಕೆ ಬರುವವರ ಸಂಖ್ಯೆ ವಿರಳವಾಗಿದೆ.

ಹೊಸ ವರ್ಷಕ್ಕೆ ಆಗಮಿಸಿದ್ದ ಕಾರಣವೂ ಪ್ರಸಕ್ತ ರಜೆಯಲ್ಲಿ ಜನರು ಇಳಿಕೆಯಾಗಲು ಕಾರಣವಾಗಿದೆ. ಗೋಕರ್ಣ, ಮುರುಡೇಶ್ವರದ ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಖಾಲಿ ಖಾಲಿ ಇರುವಂತೆ ಭಾಸವಾಗುತ್ತಿದೆ. 

ಪ್ರಮುಖ ರಸ್ತೆಗಳಲ್ಲಿ ವಾಹನಗಳ ಅಬ್ಬರ, ಸಂಚಾರ ದಟ್ಟಣೆ ಕಡಿಮೆಯಿದೆ. ಕಳೆದ ಡಿಸೆಂಬರ್ ೨೦೨೩ರ ಕ್ರಿಸ್‌ಮಸ್ ವೇಳೆ ಕೂಡಾ ಸತತ ಮೂರು ದಿನ ರಜೆ ಬಂದಿತ್ತು. ಈ ವೇಳೆ ಪ್ರವಾಸಿಗರ ನಿಯಂತ್ರಣಕ್ಕೆ ಲೈಫ್‌ಗಾರ್ಡ್ ಸಿಬ್ಬಂದಿ, ವಾಹನಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದರು.

ಡಿ.೩೦, ೩೧, ಜ.೧ರಂದು ಸಾಕಷ್ಟು ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದರು. ಹೊಸ ವರ್ಷದ ಎದುರಿನಲ್ಲಿ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಂದ ಅಂದಾಜು ಒಂದುವರೆ ಲಕ್ಷದಷ್ಟು ಜನರು ಭೇಟಿ ನೀಡಿದ್ದರು. ಹೋಮ್ ಸ್ಟೇ, ರೆಸಾರ್ಟ್, ಲಾಡ್ಜಗಳು ಭರ್ತಿಯಾಗಿತ್ತು. ಗೋಕರ್ಣ, ಮುರುಡೇಶ್ವರದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೇ ಟ್ರಾಫಿಕ್ ಜಾಮ್‌ ಉಂಟಾಗಿತ್ತು.

ಪ್ರಸಕ್ತ ವಾರ ಕೂಡಾ ಸಾಲು ಸಾಲು ರಜೆ ಬಂದಿರುವುದರಿಂದ ಹೊಟೆಲ್, ಲಾಡ್ಜ್, ರೆಸಾರ್ಟ್, ಆಟೋರಿಕ್ಷಾ, ಅಂಗಡಿ ಮುಂಗಟ್ಟು ಒಳಗೊಂಡು ಉದ್ಯಮಿಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದರು. ಜತೆಗೆ ಗೋಕರ್ಣ, ಮುರುಡೇಶ್ವರದಲ್ಲಿ ಇರುವ ಜಲಸಾಹಸಿ ಕ್ರೀಡೆಗಳನ್ನು ನಡೆಸುವವರು ಕೂಡಾ ಆಶಾಭಾವನೆ ಹೊಂದಿದ್ದರು. ಆದರೆ ಪ್ರವಾಸಿಗರು ಬರದೇ ನಿರೀಕ್ಷೆ ಹುಸಿಯಾಗಿದೆ.

ವರ್ಷಾಂತ್ಯದಲ್ಲಿ ಸಾಕಷ್ಟು ಜನರು ಪ್ರವಾಸಿಗರು ಆಗಮಿಸಿದ್ದರು. ಹೀಗಾಗಿ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿದ್ದವರು ಲಾಭ ಪಡೆದಿದ್ದರು. ಈ ಬಾರಿ ಕೂಡಾ ಮೂರು ದಿನ ರಜೆ ಬಂದಿರುವುದರಿಂದ ಪ್ರವಾಸಿಗರ ನಿರೀಕ್ಷೆಯಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ ಎಂದು ಕಾಟೇಜ್ ವ್ಯವಸ್ಥಾಪಕ ಗಣಪತಿ ಗೌಡ ತಿಳಿಸಿದ್ದಾರೆ.

Share this article