-ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶ ಸಿದ್ರಾಮ ಟಿ.ಪಿ.
---------ಕನ್ನಡಪ್ರಭ ವಾರ್ತೆ ಶಹಾಪುರ
ಸೆ.14 ರಂದು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸಿ ಕೊಡುವುದೇ ಇದರ ಉದ್ದೇಶ ಮತ್ತು ಧ್ಯೇಯವಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಮೂಲಕ ನೆಮ್ಮದಿ ಬದುಕು ನಡೆಸಬಹುದಾಗಿದೆ. ಸಾರ್ವಜನಿಕರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಸಿದ್ರಾಮ ಟಿ. ಪಿ. ಎಂದು ಹೇಳಿದರು.ನಗರದ ನ್ಯಾಯಾಲಯದಲ್ಲಿ ಸೆ.14 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 2624 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದೆ. ವಿವಿಧ ಪ್ರಕರಣಗಳಿಂದ 20.25 ಕೋಟಿ ಹಣ ಸಂದಾಯವಾಗಿದೆ ಎಂದರು.
ಸೆ.14 ರಂದು ನಡೆಯುವ ಲೋಕ ಅದಾಲತ್ ಗೆ 1200 ಪ್ರಕರಣಗಳು ನೋಂದಣಿ ಆಗಿವೆ. ಕಳೆದ ಸಲಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಈ ಬಾರಿ ಇತ್ಯರ್ಥಪಡಿಸುವ ಗುರಿಯಿದೆ. ಇದಕ್ಕೆ ವಕೀಲರ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.ರಾಜಿ ಸಂಧಾನದ ಮೂಲಕ ಆಗುವ ಪ್ರಯೋಜನಗಳನ್ನು ಕಕ್ಷಿದಾರರು ತಿಳಿದುಕೊಳ್ಳಬೇಕು. ಅವರು ಸ್ವಪ್ರತಿಷ್ಠೆ ಬಿಟ್ಟು ವಿಶಾಲ ಮನಸ್ಥಿತಿಯಿಂದ ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಂಡರೆ ಬದುಕು ಒಳ್ಳೆಯ ರೀತಿಯಲ್ಲಿ ರೂಪಿತಗೊಳ್ಳುತ್ತದೆ. ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಇದರಿಂದ ಕೋರ್ಟಿನ ಸಮಯ, ಕಕ್ಷಿದಾರರಿಗೆ ಹಣ ಉಳಿಯುತ್ತದೆ ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಅಪಘಾತ, ಪರಿಹಾರ ವ್ಯಾಜ್ಯ, ಆಸ್ತಿ ಸಂಬಂಧಿತ, ಕೌಟುಂಬಿಕ ಪ್ರಕರಣ, ವಿಮೆ, ಹಣಕಾಸು ವ್ಯಾಜ್ಯ, ಸಣ್ಣ ಪುಟ್ಟ ಸಿವಿಲ್ ವ್ಯಾಜ್ಯ, ಲೇವಾದೇವಿ, ಬಾಡಿಗೆ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ ಸಂಬಂಧಿತ ಪ್ರಕರಣಗಳನ್ನು ರಾಜಿಗಾಗಿ ನಿಗದಿಪಡಿಸಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಿದರು.ಪ್ರತಿ ಲೋಕ ಅದಲಾತ್ ನಲ್ಲಿ ವಕೀಲರು ಮತ್ತು ಕಕ್ಷಿದಾರರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆ.14 ರಂದು ನಡೆಯುವ ರಾಷ್ಟ್ರೀಯ ಲೋಕ ಅದಲಾತ್ ಗೆ ತಮ್ಮೆಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.
ಪ್ರಧಾನ ನ್ಯಾಯಾಧೀಶೆ ಶೋಭಾ, ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್, ಜಂಟಿ ಕಾರ್ಯದರ್ಶಿ ಭೀಮರಾಜ ಮೂಲಿಮನಿ ಇದ್ದರು.-----
9ವೈಡಿಆರ್12: ಶಹಾಪುರ ನ್ಯಾಯಾಲಯದಲ್ಲಿ ಸೆ. 14 ರಂದು ನಡೆಯುವ ರಾಷ್ಟ್ರೀಯ ಲೋಕದಲತ್ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಮಾತನಾಡಿದರು.