ನರಗುಂದ: ಅವಧಿ ಪೂರ್ವ ಚುನಾವಣೆ ನಡೆಯುವ ಸಂಭವವಿದೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಭವಿಷ್ಯ ನುಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಮಾಡದೇ ಇದ್ದರೂ ಕಡೇಪಕ್ಷ ರಸ್ತೆ ಗುಡಿ ಮುಚ್ಚಲು ಅನುದಾನ ಕ್ರೋಡೀಕರಿಸಬೇಕಿತ್ತು. ಮುಖ್ಯಮಂತ್ರಿಯೇ 3 ಬಾರಿ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ ಇನ್ನೂ ಗುಂಡಿ ಮುಚ್ಚಿಲ್ಲ. ಅಭಿವೃದ್ಧಿ ಬಗ್ಗೆ ಆಡಳಿತ ಪಕ್ಷದ ಯಾವೊಬ್ಬ ಶಾಸಕರೂ ಮಾತಾಡುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಆಂತರಿಕ ಒಳಜಗಳಗಳು ಹೆಚ್ಚಾಗಿವೆ ಎಂದು ಹೇಳಿದರು.ಸಚಿವ ಎಚ್.ಕೆ. ಪಾಟೀಲ ಅವರು ಗ್ಯಾರಂಟಿ ಯೋಜನೆಗಳಿಂದ ಜನರ ಬಡತನ ನಿರ್ಮೂಲಗೊಂಡಿದೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಗೆ ನಮ್ಮ ವಿರೋಧವಿಲ್ಲ. ಬಡತನ ಹೋಗಿದ್ದರೆ, ಬಿಪಿಎಲ್ ಕಾರ್ಡ್ ಏಕೆ ಬೇಕು? ಜನರ ಜೀವನಮಟ್ಟದ ಸತ್ಯಾಸತ್ಯತೆ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಮೂಲಕ ಮಾಹಿತಿ ಪಡೆಯಿರಿ. ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷ್ಯತನದಿಂದ ರಾಜ್ಯಕ್ಕೆ ಬರಬೇಕಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಕಂಪನಿಗಳು ರಾಜ್ಯ ಬಿಟ್ಟು ಹೋಗಿವೆ. ಖರ್ಗೆ ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಯಾವುದೇ ಪಕ್ಷ ಮತ್ತು ಜಾತಿಗೆ ಸೀಮಿತವಲ್ಲದ ದೇಶಭಕ್ತ ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದ ಎನ್‌ಡಿಆರ್‌ಎಫ್ ಅಡಿಯಲ್ಲಿ ಬೆಳೆಹಾನಿ ಪರಿಹಾರವನ್ನು ಇನ್ನೆರಡು ದಿನದಲ್ಲಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು. ಇದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಪಾಲಿನ ಹೆಚ್ಚಿನ ಪರಿಹಾರ ಸೇರಿಸಿ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಚಂದ್ರಗೌಡ ಪಾಟೀಲ, ದೇಸಾಯಿಗೌಡ ಪಾಟೀಲ, ಅಜ್ಜಪ್ಪ ಹುಡೇದ, ಉಮೇಶಗೌಡ ಪಾಟೀಲ, ಎಸ್.ಆರ್. ಪಾಟೀಲ, ಚಂದ್ರು ದಂಡಿನ, ಗುರಪ್ಪ ಆದೆಪ್ಪನವರ, ಮಲ್ಲಪ್ಪ ಮೇಟಿ, ರಾಚನಗೌಡ ಪಾಟೀಲ, ಉಮೇಶ ಯಳ್ಳೂರ, ನಾಗರಾಜ ನೆಗಳೂರ, ಅನಿಲ ಧರಿಯಣ್ಣವರ, ವಿಠ್ಠಲ ಹವಾಲ್ದಾರ, ಸಂತೋಷ ಹಂಚಿನಾಳ ಇತರರಿದ್ದರು.