ಉಪ ಚುನಾವಣೆ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ

KannadaprabhaNewsNetwork |  
Published : Jul 11, 2026, 12:30 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ಬೈಪಾಸ್ ರಸ್ತೆಯ ವೈಟ್ ವಾಲ್ ಸಭಾಂಗಣದಲ್ಲಿ ಶುಕ್ರವಾರ ಪಕ್ಷೇತರ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಾನು ಅಧಿಕೃತವಾಗಿ ಹಿರಿಯೂರು ಕ್ಷೇತ್ರದ ಅಭ್ಯರ್ಥಿ ಆಗಲಿದ್ದು ಯಾವ ಒತ್ತಡಕ್ಕೂ ಮಣಿಯದೇ ಕೊನೆಯವರೆಗೂ ಕಣದಲ್ಲಿರುತ್ತೇನೆ ಎಂದು ಉಪ ಚುನಾವಣೆ ಪಕ್ಷೇತರ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ಹೇಳಿದರು.

ನಗರದ ಬೈಪಾಸ್ ರಸ್ತೆಯ ವೈಟ್ ವಾಲ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸದ್ಯಕ್ಕೆ ಪಕ್ಷೇತರ ಅಭ್ಯರ್ಥಿ ಆಗುವ ನಿಲುವಿನಿಂದ ಸಂಘಟನೆ ಮಾಡುತ್ತಿದ್ದೇನೆ. ಚುನಾವಣೆ ಘೋಷಣೆ ಆದ ನಂತರ ಯಾವ ಪಕ್ಷದಿಂದ ಸ್ಪರ್ಧಿಸುವುದು ಅಂತ ನಿರ್ಧಾರ ಮಾಡುತ್ತೇನೆ. ಕಳೆದ ಹತ್ತು ವರ್ಷಗಳಿಂದ ಹಿರಿಯೂರಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ. ಹಾಗಾಗಿ ಈ ಬಾರಿ ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದೇನೆ. ಕಳೆದ ಬಾರಿ ನನ್ನನ್ನು ಮಿಸ್ ಗೈಡ್ ಮಾಡಿದ್ದರಿಂದ ಕಣದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಈ ಬಾರಿ ಯಾವುದೇ ಅನುಮಾನ ಬೇಡ. ನಾನು ಹಿರಿಯೂರು ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಆಡುವುದು ಶತಃಸಿದ್ದ. ನಾನು ಓಡಾಡಿದ ಕಡೆಯೆಲ್ಲಾ ಜನರಿಂದ ಒಳ್ಳೆ ಅಭಿಪ್ರಾಯ ಕೇಳಿ ಬರುತ್ತಿದೆ. ಮೂರು ಪಕ್ಷಗಳ ಕಾರ್ಯಕರ್ತರು ನನ್ನ ಜೊತೆ ಬರಲು ತಯಾರಿದ್ದಾರೆ. ಎಲ್ಲಾ ಜಾತಿಗಳ ಜನರ ಬೆಂಬಲ ನನಗೆ ಸಿಗುತ್ತಿದೆ. 2018 ರಲ್ಲಿ ನಾನು ರಾಜಕೀಯಕ್ಕೆ ಪ್ರವೇಶ ಮಾಡಿದ್ದೇ ಇಲ್ಲಿಂದ. ಹಾಗಾಗಿ ಇದೇ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಿದ್ದೇನೆ. 10 ವರ್ಷದ ಹಿಂದೆ ನನ್ನ ಜೊತೆ ಇದ್ದ ಮುಖಂಡರು ಈಗಲೂ ಇದ್ದಾರೆ. ಕ್ಷೇತ್ರದ ಮುಖಂಡರ ಸಂಪರ್ಕ ಮೊದಲಿನಿಂದಲೂ ಉಳಿಸಿಕೊಂಡು ಬಂದಿದ್ದೇನೆ. ಈಗಾಗಲೇ ನಾನು ಕ್ಷೇತ್ರದಲ್ಲೇ ಮನೆ ಮಾಡಿದ್ದು ಇಲ್ಲೇ ವಾಸ ಮಾಡುತ್ತೇನೆ. ಜಮೀನು ತೆಗೆದುಕೊಂಡಿದ್ದೇನೆ. ಹಾಗಾಗಿ ಇಲ್ಲೇ ಇರುತ್ತೇನೆ. ಜನಕ್ಕೆ ಬದಲಾವಣೆ ಬೇಕಿದ್ದು ನನಗೆ ಗೆಲ್ಲುವ ನಿರೀಕ್ಷೆ ಇದೆ. ಚುನಾವಣೆಯಲ್ಲಿ ನನ್ನ ವಿರುದ್ಧ ಸರ್ಕಾರವೇ ನಿಲ್ಲಲಿದೆ. ಆದರೂ ನಾನು ಸ್ಪರ್ದಿಸುವುದು ಖಚಿತ. ಸ್ಥಳೀಯರು ಬೇಕು ಅಂತ ಅವರ ಬೆಂಬಲಿಗರು ಕೇಳುತ್ತಿದ್ದಾರೆ ಅಷ್ಟೇ. ಇಲ್ಲಿ ಸ್ಥಳೀಯರು ಹೊರಗಿನವರು ಎಂದು ಮತದಾರ ಯೋಚಿಸುವುದಿಲ್ಲ. ನಾನು ಹೆಚ್ಚಿನ ವಿದ್ಯಾವಂತನಲ್ಲ. ಇದೀಗ ದೊಡ್ಡದೊಂದು ಕಂಪನಿ ಕಟ್ಟಿದ್ದೇನೆ. ನಾನು ಅಭ್ಯರ್ಥಿ ಆಗುತ್ತಿರುವುದು ಕ್ಷೇತ್ರದ ಅಭಿವೃದ್ಧಿಗಾಗಿ. ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಜಲಾಶಯ ಇದ್ದರು ಸಹ ಕಲ್ವಳ್ಳಿ ಐಮಂಗಲ ಭಾಗದ ಜನರಿಗೆ ಕುಡಿಯುವ ನೀರು ಇಲ್ಲ. ಆ ಭಾಗದ ರೈತರ ನೀರಿನ ಬವಣೆ ನೀಗಿಸುವ ಸಂಕಲ್ಪ ಮಾಡಿದ್ದೇನೆ. ಸದ್ಯಕ್ಕೆ ನಾನು ಪಕ್ಷೇತರ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿದ್ದೇನೆ. ಎದುರಾಳಿ ಯಾರು ಆದರೂ ನಾನು ಕಣದಲ್ಲಿ ಇರುತ್ತೇನೆ. ಯಾರ ಒತ್ತಡಕ್ಕೂ ನಾನು ಮಣಿಯುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಕೆಟಿ ಶ್ರೀನಿವಾಸ್, ಆಸೀಫ್, ದೇವರಾಜ್, ಮಹಾಲಿಂಗಪ್ಪ, ಡಾಬಾ ಚಿಕ್ಕಣ್ಣ, ಸಮಿವುಲ್ಲಾ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನದೇ ಪುಸ್ತಕ ಲೋಕಾರ್ಪಣೆ ಮಾಡಿ ಮದುವೆಯಾದ ಯುವಕ
ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಬಿ.ಎಫ್‌ ದಂಡಿನ