ಬ್ಯಾಡಗಿ: ಯಾರ ಒತ್ತಡಕ್ಕೂ ಮಣಿಯುವ ಮಾತೆ ಇಲ್ಲ, ಮುಖ್ಯರಸ್ತೆ ಅಗಲೀಕರಣದಲ್ಲಿ ಎಲ್ಲರಿಗೂ ಒಂದೇ ಮಾನದಂಡ ಹಾಗೂ ಅಳತೆ, ಇದರಲ್ಲಿ ಯಾವುದೇ ರಾಜಿ ಇಲ್ಲ. ಅಳತೆಯ ಬಗ್ಗೆ ಗೊಂದಲ ಸೃಷ್ಟಿಸಿ ಕಾಮಗಾರಿಗೆ ಅಡ್ಡಿಪಡಿಸುವವರ ಮಾತಿಗೆ ಯಾರು ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮುಖ್ಯ ರಸ್ತೆ ವರ್ತಕರಿಗೆ ಖಡಕ್ ಸೂಚನೆ ನೀಡಿದರು.
ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಯಮಾನುಸಾರ ಅಳತೆ ನಿಗದಿಪಡಿಸಲಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ತಲಾ 33 ಅಡಿ ಜಾಗವನ್ನು ಒಳಗೊಂಡಂತೆ ಕಾಮಗಾರಿ ನಡೆಯಲಿದೆ. ಈ ಹಿಂದೆ ಜಂಟಿ ಮಾಪನ (ಜೆಎಂಸಿ) ನಡೆಸುವ ಸಂದರ್ಭದಲ್ಲಿಯೇ ಅಗತ್ಯ ಅಳತೆಗಳನ್ನು ಗುರುತಿಸಿ ನಿಗದಿಪಡಿಸಲಾಗಿದೆ. ಹೀಗಿರುವಾಗ ಇದೀಗ ಮತ್ತೆ ಅಳತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ಹಾಗೂ ಒಂದೊಂದು ಕಾರಣ ಮುಂದಿಟ್ಟು ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಪರಿಹಾರ ಪಡೆದ ಬಳಿಕವೂ ತಕರಾರೇಕೆ?: ಸರಕಾರ ರಸ್ತೆ ಅಗಲೀಕರಣಕ್ಕಾಗಿ ವಶಪಡಿಸಿಕೊಂಡ ಜಾಗಕ್ಕೆ ನಿಯಮಾನುಸಾರ ಪರಿಹಾರದ ಮೊತ್ತವನ್ನು ನೀಡಲಾಗಿದೆ. ಆದರೂ ಕೆಲವರು ಇದೀಗ ಅಳತೆ ಸರಿಯಿಲ್ಲ, ಜಾಗದ ವಿಚಾರದಲ್ಲಿ ಗೊಂದಲವಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ನಿಗದಿಪಡಿಸಿದ ನಿಯಮ ಮತ್ತು ಅಳತೆಗಳ ಪ್ರಕಾರವೇ ಕಾಮಗಾರಿ ನಡೆಯಲಿದ್ದು, ಯಾರಿಗೂ ಪ್ರತ್ಯೇಕ ರಿಯಾಯಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದರು.ರಸ್ತೆ ಅಗಲೀಕರಣವು ಪಟ್ಟಣದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಮಹತ್ವದ ಯೋಜನೆಯಾಗಿದೆ. ಇಂತಹ ಅಭಿವೃದ್ಧಿ ಕಾಮಗಾರಿಗೆ ವೈಯಕ್ತಿಕ ಹಿತಾಸಕ್ತಿ ಅಥವಾ ಅನಗತ್ಯ ಆಕ್ಷೇಪಗಳ ಮೂಲಕ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು, ಒಂದೇ ಅಳತೆ ಮತ್ತು ಒಂದೇ ಮಾನದಂಡ ಅನ್ವಯವಾಗಲಿದೆ. ಯಾರ ಒತ್ತಡಕ್ಕೂ ಮಣಿಯದೆ ನಿಗದಿತ ನಿಯಮಗಳಂತೆ ಕಾಮಗಾರಿ ಮುಂದುವರಿಸಲಾಗುವುದು. ಕಾಮಗಾರಿಗೆ ಅಡ್ಡಿಪಡಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ, ಪಟ್ಟಣದ ಅಭಿವೃದ್ಧಿ ಕಾರ್ಯ ಸುಗಮವಾಗಿ ಪೂರ್ಣಗೊಳ್ಳಲು ವರ್ತಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಿದೆ ಎಂದರು.
ಮುಖ್ಯರಸ್ತೆ ಕಾಮಗಾರಿ ಆರಂಭವಾದರೂ ಕೆಲವರು ಇನ್ನೂ ತಮ್ಮ ಅಳಿದುಳಿದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿಕೊಂಡಿಲ್ಲ, ಜನರ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಅಂತಹವುಗಳನ್ನ ತೆರವುಗೊಳಿಸಿ ಸಹಕಾರ ನೀಡಿ, ಇಲ್ಲದೇ ಹೋದಲ್ಲಿ ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.