ಮಾತೃಭಾಷೆಯಲ್ಲಿಯೇ ಉನ್ನತ ಶಿಕ್ಷಣ ನೀಡುವ ತುರ್ತು ಇದೆ: ಚಂದ್ರಣ್ಣ ಎಚ್.ಟಿ.

KannadaprabhaNewsNetwork | Published : Apr 13, 2025 2:03 AM

ಸಾರಾಂಶ

ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆ ಕಠಿಣವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಿಂದ ಇಂಗ್ಲೀಷ್‌ಗೆ, ಇಂಗ್ಲೀಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಪ್ರಶ್ನೆಗಳು ಬಂದಾಗ ಕಷ್ಟ ಅನುಭವಿಸುತ್ತಿದ್ದಾರೆ. ಅಂತಹವರಿಗೆ ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಉಪ ನಿರ್ದೇಶಕರ ಕಚೇರಿಯ ಆಂಗ್ಲ ವಿಷಯ ಪರಿವೀಕ್ಷಕ ಚಂದ್ರಣ್ಣ ಎಚ್.ಟಿ. ಹೇಳಿದರು.

ವಾರ್ಷಿಕ ಶಿಬಿರ । ಸರ್ಕಾರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆ ಕಠಿಣವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಿಂದ ಇಂಗ್ಲೀಷ್‌ಗೆ, ಇಂಗ್ಲೀಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಪ್ರಶ್ನೆಗಳು ಬಂದಾಗ ಕಷ್ಟ ಅನುಭವಿಸುತ್ತಿದ್ದಾರೆ. ಅಂತಹವರಿಗೆ ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಉಪ ನಿರ್ದೇಶಕರ ಕಚೇರಿಯ ಆಂಗ್ಲ ವಿಷಯ ಪರಿವೀಕ್ಷಕ ಚಂದ್ರಣ್ಣ ಎಚ್.ಟಿ. ಹೇಳಿದರು.

ತಾಲೂಕಿನ ಮಾರಪ್ಪನಟ್ಟಿಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್ಎಸ್ಎಸ್‌ನ ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವಲ್ಲಿ ಯುವಕರ ಪಾತ್ರ ವಿಷಯ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಹೆಚ್ಚಿನ ಶ್ರಮವಹಿಸಿ, ಶಿಕ್ಷಣದಲ್ಲಿ ಉನ್ನತ ಗುರಿಯನ್ನು ಮುಟ್ಟಬೇಕು. ಉದ್ಯೋಗ ಪಡೆದು ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಬೇಕು. ಗುರುವಿನಲ್ಲಿ ಭಕ್ತಿ ಭಾವಗಳನ್ನ ಬೆಳೆಸಿಕೊಂಡು, ಗೌರವ ನೀಡುವುದನ್ನು ಮರೆಯಬಾರದು ಎಂದರು.

ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಅನುತ್ತೀರ್ಣರಾದಾಗ ಅವರನ್ನು ಪ್ರೀತಿ ಬಾಂಧವ್ಯದಿಂದ ಸಂಭಾಳಿಸಬೇಕು. ಇಲ್ಲದಿದ್ದರೆ ಅವರು ದಾರಿತಪ್ಪಿ ದುಶ್ಚಟಗಳಿಗೆ ಈಡಾಗುವ ಸಂಭವವಿರುತ್ತದೆ. ಹಾಗಾಗಿ ಪೋಷಕರು ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನಹರಿಸಿ, ಅವರನ್ನು ಪ್ರಬುದ್ಧ ನಾಗರಿಕರನ್ನಾಗಿ ಮಾಡಲು ಸಹಾಯ ಮಾಡಬೇಕು ಎಂದರು.

ಸಹಾಯಕ ಕೃಷಿ ಕೃಷಿ ನಿರ್ದೇಶಕ ಪ್ರವೀಣ್ ಚೌದರಿ ಮಾತನಾಡಿ, ಕೃಷಿ ಇಲಾಖೆ ಯೋಜನೆಗಳನ್ನು ರೈತರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಆರೋಗ್ಯದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಅರಿತು, ಅವುಗಳನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಸಿ, ಜನರಿಗೆ ದೊರಕುವಂತೆ ಮಾಡಬೇಕು. ಹೆಚ್ಚುತ್ತಿರುವ ರೋಗ ರುಜಿನಗಳಿಗೆ ಸಿರಿಧಾನ್ಯಗಳು ಮದ್ದಾಗಿ ಪರಿಣಮಿಸುತ್ತವೆ, ರೈತರು ರಾಸಾಯನಿಕಗಳನ್ನು ಮಿತವಾಗಿ ಬಳಸಿ, ಸಾವಯವ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವನಜಾಕ್ಷಮ್ಮ ಭಾಗಯ್ಯ ಮಾತನಾಡಿ, ವಿದ್ಯಾವಂತರು ಈಗ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬಹುದು. ಯಾಂತ್ರಿಕರಣ ಸಹಾಯದಿಂದ ಕೃಷಿಯನ್ನ ಸುಲಭಗೊಳಿಸಲಾಗುತ್ತಿದೆ. ಹಿಂದಿನಷ್ಟು ಕಷ್ಟಪಡದೆ ಈಗ ಕೃಷಿಯ ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು, ಹಾಗಾಗಿ ವಿದ್ಯಾವಂತರು ಹೊಲಗಳನ್ನು ಮಾರದೆ ಅವುಗಳನ್ನು ರಕ್ಷಿಸಿ ಇಟ್ಟುಕೊಂಡು, ಕೃಷಿಯಲ್ಲಿ ತೊಡಗಬೇಕು. ಹೆಚ್ಚಿನ ದವಸಧಾನ್ಯ ಬೆಳೆದು ಸಮಾಜಕ್ಕೆ ನೀಡಿ, ರೈತರ ಕರ್ತವ್ಯ ನಿಭಾಯಿಸಬೇಕು ಎಂದರು.

ವಿದ್ಯಾರ್ಥಿಗಳು ಸೌಜನ್ಯಳ ಕೊಲೆಯ ಚಿತ್ರಣವನ್ನು ನಾಟಕದ ಮುಖಾಂತರ ಪ್ರಸ್ತುತಪಡಿಸಿದರು. ಭಾರತಾಂಬೆಯ ಭೂಪಟಕ್ಕೆ ದೀಪಗಳ ಮೆರಗು ನೀಡಿದರು.

ಕಾಂತರಾಜು, ನಾಗರಾಜು, ರಮೇಶ್ ಭಟ್, ನಟೇಶ್, ವಿದ್ಯಾ ಕೆಬಿ, ಎನ್ಎಸ್ಎಸ್ ಅಧಿಕಾರಿಗಳಾದ ಲಾಲ್ ಸಿಂಗ್ ನಾಯಕ್, ಡಾ.ಸತೀಶ್ ಗೌಡ ಎಸ್., ಫೈರೋಜಾ ಭಾಗವಹಿಸಿದ್ದರು.

Share this article