ಬಸವಗಿರಿಯಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮ
ಬಸವಾದಿ ಶರಣರ ವಚನಗಳಲ್ಲಿ ಪರಿಸರ ಪ್ರಜ್ಞೆ ತುಂಬಿ ತುಳುಕುತ್ತಿದೆ ಎಂದು ಶಿಕ್ಷಕ ಡಾ.ಶಿವಲಿಂಗ ಹೇಡೆ ಹೇಳಿದರು.
ಲಿಂಗಾಯತ ಮಹಾ ಮಠದಿಂದ ನಗರದ ಬಸವಗಿರಿಯಲ್ಲಿ ಸೋಮವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಶರಣರು ಮತ್ತು ಪರಿಸರ’ ಕುರಿತು ಉಪನ್ಯಾಸ ನೀಡಿ, ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದರು. ಪಶು, ಪ್ರಾಣಿ, ಕ್ರಿಮಿ ಕೀಟ, ಸಸ್ಯ ಸಂಕುಲ ಸಮತೋಲನದಿಂದಿದ್ದರೆ ಜಗತ್ತು ಚೆನ್ನಾಗಿರುತ್ತದೆ. ಪರಿಸರದ ಮೇಲೆ ಮಾನವನ ದೌರ್ಜನ್ಯ ನಿಲ್ಲಬೇಕು. ಪಂಚಭೂತಗಳು ದೇವರ ಭಿಕ್ಷೆ, ಅವುಗಳನ್ನು ಕಲುಷಿತಗೊಳಿಸುವುದು ಮನುಷ್ಯನಿಗೆ ಸಲ್ಲದೆಂದರು ಎಂದು ಹೇಳಿದರು.ಪ್ರಭುದೇವ ಸ್ವಾಮೀ ಸಾನಿಧ್ಯ ವಹಿಸಿ ಮಾತನಾಡಿ, ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭುದೇವರು ಸೇರಿದಂತೆ ಅನೇಕ ಶರಣರು ಪ್ರಕೃತಿ, ಗಿಡ ಮರಗಳ ಕುರಿತು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ ಹೇಳಿದರು.
ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು. ಚನ್ನಬಸಪ್ಪ ಹಂಗರಗಿ ಸ್ವಾಗತಿಸಿ ಜಗದೇವಿ ಜಗನ್ನಾಥ ಚಿಮಕೋಡೆ ಗುರುಪೂಜೆ ಹಾಗೂ ಭಕ್ತಿ ದಾಸೋಹಗೈದರು.