ಚಾರ್ಜ್‌ಶೀಟ್‌ ಸಲ್ಲಿಸದೆ ಸಾಕ್ಷ್ಯ ಇದೆಅನ್ನೋದು ತಪ್ಪು: ಬೈರತಿ ಪರ ವಕೀಲ

KannadaprabhaNewsNetwork |  
Published : Jan 20, 2026, 04:15 AM IST
ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ  | Kannada Prabha

ಸಾರಾಂಶ

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ ಅವರನ್ನು ಸುಪರ್ದಿಗೆ ಪಡೆದು ವಿಚಾರಣೆ ನಡೆಸಲೇಬೇಕೆಂದು ಸಿಐಡಿ ಪೊಲೀಸರು ಪ್ರತಿಪಾದಿಸುವುದಾದರೆ, ಸೀಮಿತ ಅವಧಿಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಅವಕಾಶವಿದೆ ಎಂದು ಬಸವರಾಜ್‌ ಪರ ವಕೀಲರು ನ್ಯಾಯಪೀಠದ ಮುಂದೆ ವಾದಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ ಅವರನ್ನು ಸುಪರ್ದಿಗೆ ಪಡೆದು ವಿಚಾರಣೆ ನಡೆಸಲೇಬೇಕೆಂದು ಸಿಐಡಿ ಪೊಲೀಸರು ಪ್ರತಿಪಾದಿಸುವುದಾದರೆ, ಸೀಮಿತ ಅವಧಿಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಅವಕಾಶವಿದೆ ಎಂದು ಬಸವರಾಜ್‌ ಪರ ವಕೀಲರು ನ್ಯಾಯಪೀಠದ ಮುಂದೆ ವಾದಿಸಿದರು. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ 5ನೇ ಆರೋಪಿಯಾಗಿರುವ ಬೈರತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾ. ಸುನೀಲ್ ದತ್ತ ಅವರ ಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಬಸವರಾಜ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ, ದೋಷಾರೋಪ ಪಟ್ಟಿ ಸಲ್ಲಿಸದೆ ಕೇವಲ ಸಾಕ್ಷ್ಯಾಧಾರಗಳಿದ್ದು, ಹೆಚ್ಚಿನ ತನಿಖೆ ನಡೆಸಬೇಕಿದೆ, ಬಸವರಾಜ್‌ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು ಎಂದು ಹೇಳುತ್ತಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ವಾದಿಸಿದರು.ಅರ್ಜಿದಾರರ ವಿರುದ್ಧ ಆರೋಪಗಳಿಗೆ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಧಾರಗಳೂ ಇಲ್ಲ. ಹಾಗೊಂದು ವೇಳೆ ಸಾಕ್ಷ್ಯಧಾರಗಳಿವೆ ಎಂದರೆ ಸಿಐಡಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಬಹುದಾಗಿದೆ ಎಂದರು.

ಈವರೆಗೆ ನೋಟಿಸ್‌ ನೀಡಿಲ್ಲ: ಪ್ರಕರಣದ ತನಿಖೆಯು 2025ರ ಜು.24ಕ್ಕೆ ಸಿಐಡಿ ಪೊಲೀಸರಿಗೆ ವರ್ಗಾವಣೆಯಾದ ನಂತರದಿಂದ ಈವರೆಗೂ ತನಿಖೆಗೆ ಹಾಜರಾಗಲು ಅರ್ಜಿದಾರರಿಗೆ ತನಿಖಾಧಿಕಾರಿಗಳು ನೋಟಿಸ್‌ ನೀಡಿಲ್ಲ. ಅದಕ್ಕೂ ಮುನ್ನ ಜು.19 ಮತ್ತು 23ರಂದು ಭಾರತೀನಗರ ಠಾಣಾ ಪೊಲೀಸರ ಮುಂದೆ ಬಸವರಾಜ್‌ ಎರಡು ಬಾರಿ ಹಾಜರಾಗಿ ಹೇಳಿಕೆ ನೀಡಿದ್ದರು. ಮೊದಲ ಬಾರಿಗೆ ಕೇಳಿದ 50 ಪ್ರಶ್ನೆ, ಎರಡನೇ ಬಾರಿ ಕೇಳಿದ 100 ಪ್ರಶ್ನೆಗಳಿಗೂ ಬಸವರಾಜ್‌ ಉತ್ತರಿಸಿದ್ದಾರೆ. ಇದೀಗ ಆ ಉತ್ತರಗಳು ಸುಳ್ಳೆಂದು ಸಿಐಡಿ ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಉತ್ತರಗಳು ಸುಳ್ಳೆಂದು ತೋರಿದ್ದರೆ, ನೋಟಿಸ್ ನೀಡಬಹುದಿತ್ತು. ಉತ್ತರಗಳು ಸುಳ್ಳು ಎನ್ನುವುದು ನಿರೀಕ್ಷಣಾ ಜಾಮೀನು ರದ್ದತಿಗೆ ಕೋರಲು ಆಧಾರವಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಸವರಾಜ್‌ ಭಾಗಿಯಾಗಿಲ್ಲ. ಅವರು ನಾಲ್ಕು ಬಾರಿ ಶಾಸಕರಾಗಿದ್ದು, ಕ್ರಿಮಿನಲ್‌ ಚಟುವಟಿಕೆಗಳ ಹಿನ್ನೆಲೆ ಇಲ್ಲ. ಗೌರವಾನ್ವಿತ ಮನೆತನ-ಕುಟುಂಬದಿಂದ ಬಂದಿರುವ ಅವರು, ಸಮಾಜಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು.

ತನಿಖೆಗೆ ಸಹಕರಿಸಿಲ್ಲ ಎಂದು ಹೇಳಿಲ್ಲ:

ಈ ಕಳೆದ ಆರು ತಿಂಗಳಲ್ಲಿ ತನಿಖೆಗೆ ಸಹಕರಿಸಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬುದಾಗಿ ತನಿಖಾಧಿಕಾರಿಗಳು ಯಾವತ್ತೂ ಹೇಳಿಲ್ಲ. ತನಿಖೆಗೆ ಸಹಕರಿಸಲು ಬಸವರಾಜ್‌ ಸದಾ ಸಿದ್ಧರಿದ್ದಾರೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತು ಪಾಲಿಸಲಿದ್ದಾರೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು. ಕಸ್ಟಡಿ ಪಡೆದು ವಿಚಾರಣೆ ನಡೆಸಬೇಕಿದೆ ಎಂದು ತನಿಖಾಧಿಕಾರಿಗಳು ಪ್ರತಿಪಾದಿಸುವುದಾದರೆ ಸೀಮಿತ ಅವಧಿಗೆ ಕಸ್ಟಡಿಗೆ ನೀಡಬಹುದು ಎಂದು ತಿಳಿಸಿ ಚೌಟ ಅವರು ವಾದ ಪೂರ್ಣಗೊಳಿಸಿದರು.

ಈ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಸಿಐಡಿ ಪೊಲೀಸರು ಪರ ಪ್ರಕರಣದ ವಿಶೇಷ ಸರ್ಕಾರಿ ಅಭೀಯೋಜಕರಾಗಿರುವ ಬಿ.ಎನ್. ಜಗದೀಶ್‌ ಮಂಗಳವಾರ ಪ್ರತಿವಾದ ಮಂಡಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ
ಕೆಂಪೇಗೌಡ ಲೇಔಟ್‌ ವಾಸಿಗಳಿಗೆ ಕಟ್ಟಡ ತೆರವಿಗೆ ಬಿಡಿಎ ನೋಟಿಸ್‌