ಕನ್ನಡಪ್ರಭ ವಾರ್ತೆ, ತುಮಕೂರು
ಯೋಗಾಸನ ಭಾರತ್ ಐದು ವರ್ಷದ ಸಂಸ್ಥೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಕಾರದಿಂದ ಇಂತಹ ಒಂದು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಯೋಗಪಟುಗಳನ್ನು ಮುಂದಿನ ಏಷ್ಯಾ ಗೇಮ್ಸ್ ಮತ್ತು ಒಲಂಪಿಕ್ ಗೇಮ್ಸ್ ಗೆ ಸಿದ್ದಪಡಿಸುವ ಕೆಲಸ ಮಾಡುತ್ತಿದ್ದು, ಇದರ ಹಿಂದೆ ಅನೇಕರ ಶ್ರಮವಿದೆ ಎಂದು ಯೋಗಾಸನ ಭಾರತ್ ಸಂಸ್ಥೆಯ ಅಧ್ಯಕ್ಷ ಉದಿತ್‌ಶೆತ್ ತಿಳಿಸಿದ್ದಾರೆ.ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಯೋಗಾಸನ ಭಾರತ ಸಂಸ್ಥೆಯ,ಕರ್ನಾಟಕ ಯೋಗಾಸನ ಸ್ಟೋರ್ಟ್ಸ್ ಅಸೋಸಿಯೇಷನ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ರಾಷ್ಟ್ರೀಯ ಹಿರಿಯರ ಯೋಗಾಸನ ಸ್ಪರ್ಧೆ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಇಂದು ಏಷ್ಯಾ ಚಾಂಪಿಯನ್ ಶಿಫ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ನೀವೆಲ್ಲರೂ ಚೆನ್ನಾಗಿ ಅಭ್ಯಾಸ ಮಾಡಿ, ದೇಶಕ್ಕೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರು. ಕರ್ನಾಟಕ ಯೋಗಾಸನ ಸ್ಟೋರ್ಟ್ ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಮಾತನಾಡಿ, ಬೆಂಗಳೂರಿಗೆ ಹತ್ತಿರವಾಗಿ ತುಮಕೂರು ಇರುವುದರಿಂದ ಸಾಕಷ್ಟು ಕೈಗಾರಿಕೆಗಳು ಬರುತ್ತಿವೆ. ಇವರ ಸಹಕಾರ ಪಡೆದು, ಕ್ರೀಡೆಯನ್ನು ಮತ್ತಷ್ಟು ಉದ್ದೀಪನಗೊಳಿಸಲು ಅವಕಾಶವಿದೆ. ಯೋಗಾಸನ ಇಂದು ಪಠ್ಯ ಮತ್ತು ಪಠ್ಯೇತರ ವಿಷಯವಾಗಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. 2014ರಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಯೋಗದಿನವನ್ನು ಘೋಷಣೆ ಮಾಡಿದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಕಲಿಯಲು ಹೆಚ್ಚಿನ ಜನರು ಮುಂದೆ ಬರುತ್ತಿದ್ದಾರೆ. ಬ್ಯಾಂಕುಗಳು,ವಾಣಿಜ್ಯ ಸಂಸ್ಥೆಗಳು ಪ್ರಾಯೋಜಕತ್ವ ನೀಡುವ ಮೂಲಕ ಯೋಗಾಸನ ಕ್ರೀಡೆಯನ್ನು ಬೆಳೆಸುತ್ತಿವೆ ಎಂದರು.ಕರ್ನಾಟಕ ಯೋಗಾಸನ ಸ್ಟೋರ್ಟ್ ಅಸೋಸಿಯೇಷನ್ ಕಾರ್ಯದರ್ಶಿ ನಿರಂಜನ್ ಮೂರ್ತಿ ರಾಷ್ಟ್ರೀಯ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ, ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ. ಸ್ಥಳೀಯರು ಸಹಕಾರ ನೀಡಿದ್ದು ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮುರುಳೀಧರ ಹಾಲಪ್ಪ ಮಾತನಾಡಿ, ನಾಲ್ಕು ದಿನಗಳ ಕಾಲ ನಡೆದ ಐದನೇ ರಾಷ್ಟ್ರೀಯ ಹಿರಿಯರ ಯೋಗಾಸನ ಸ್ಪರ್ಧೆಯಲ್ಲಿ 26 ರಾಜ್ಯಗಳ 900ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು, ಪ್ರದರ್ಶನ ನೀಡಿದ್ದಾರೆ. ಹಿರಿಯರಾದ ಸೊಗಡುಶಿವಣ್ಣ, ನಿರಂಜನಮೂರ್ತಿ, ದಿವ್ಯಾ ಇವರ ಸಹಕಾರದಲ್ಲಿ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು.ಕೇರಳದ ಭದ್ರನಾಥ ಸ್ವಾಮೀಜಿ ಮಾತನಾಡಿ, ಇಲ್ಲಿ ಪ್ರದರ್ಶನ ನೀಡುತ್ತಿರುವ ಯೋಗಪಟುಗಳನ್ನು ನೋಡಿದರೆ ನನಗೆ ಮಾತೇ ಬರುತ್ತಿಲ್ಲ. ಇಲ್ಲಿನ ಸರಕಾರ ಯುವಜನತೆಯನ್ನು ಸರಿಯಾದ ದಾರಿಗೆ ತರಲು ಸನಾತನ ಕ್ರೀಡೆಯಾಗ ಯೋಗವನ್ನು ಕಲಿಸುತ್ತಿದೆ. ಆದರೆ ಕೇರಳದಲ್ಲಿ ಸುಮಾರು ಶೇ 70 ರಷ್ಟು ಯುವಕರು ಡ್ರಗ್ಸ್ ಗೆ ಬಲಿಯಾಗಿದ್ದಾರೆ. ಸ್ಥೂಲ ಶರೀರ, ಸೂಕ್ಷ್ಮ ಶರೀರ ಆಗಲು ಯೋಗ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಸೊಗಡು ಶಿವಣ್ಣ, ಎಸ್.ಬಿ.ಐನ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಚೌಹಾಣ್ , ಕರ್ನಾಟಕ ಯೋಗಾಸನ ಸ್ಟೋರ್ಟ್ ಅಸೊಸಿಯೇಷನ್‌ನ ಕಾರ್ಯದರ್ಶಿ ಡಾ.ನಿರಂಜನಮೂರ್ತಿ,ಮಮತ, ವಕೀಲರಾದ ಆರ್.ಡಿ.ಕುಮಾರ್, ರೋಟರಿ ಅಧ್ಯಕ್ಷರಾದ ರಾಜೇಶ್ವರಿ, ಧನಿಯಕುಮಾರ್, ಇಸ್ಮಾಯಿಲ್,ಯೋಗಾಸನ ಭಾರತ್ ಖಜಾಂಚಿ ರಚಿತ್ ಕೌಶಿಕ್,ಸಿರಿಸಂಗೀತ ಸಂಸ್ಥೆಯ ನಿರ್ದೇಶಕ ಡಾ.ಸುರೇಶ ಚಿಕ್ಕಣ್ಣ,ನಿರಂಜನ್ ರೆಡ್ಡಿ, ಹರ್ಷನ್ ಆರ್.ಶೆಟ್ಟಿ, ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು.