ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಂಗ್ರೆಸ್ ನೊಳಗೆ ಮುಖ್ಯಮಂತ್ರಿ ಸ್ಥಾನ ತುಂಬಬಲ್ಲ ಸಿದ್ದರಾಮಯ್ಯ ಅವರಂತಹ ಮತ್ತೊಬ್ಬ ಸಮರ್ಥ ನಾಯಕ ಇಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ನಾನಾ ರೀತಿ ತಂತ್ರಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ವರಿಷ್ಠರು ಏನು ತೀರ್ಮಾನ ಮಾಡುತ್ತಾರೊ ಗೊತ್ತಿಲ್ಲ. ಸದ್ಯಕ್ಕೆ ಆಪಕ್ಷದಲ್ಲಿ ಮುಖ್ಯಮಂತ್ರಿಯಾಗುವ ಸೂಕ್ತ ನಾಯಕ ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಹೊರತು ಪಡಿಸಿದರೆ ಆ ಸ್ಥಾನ ತುಂಬ ಬಲ್ಲ ನಾಯಕ ಇಲ್ಲ. ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿಯೂ ಮುಖ್ಯಮಂತ್ರಿ ಸ್ಥಾನ ತುಂಬುವ ಸಾಮರ್ಥ್ಯವಿರುವ ನಾಯಕ ಇಲ್ಲ.
ಸಂವಿಧಾನ ಬದ್ಧವಾಗಿ ಶಾಸಕರ ಬೆಂಬಲ ಇರುವವರು ಮುಖ್ಯಮಂತ್ರಿ ಆಗಬಹುದು. ಆದರೆ, ಸಿದ್ದರಾಮಯ್ಯರವರ ವ್ಯಕ್ತಿತ್ವ, ಚಿಂತನೆ, ಹಿರಿತನ, ಎಲ್ಲವನ್ನು ನೋಡಿದಾಗ ರಾಜ್ಯದಲ್ಲಿ ಅಷ್ಟು ಸುಲಭವಾಗಿ ತೆಗೆಯಲು ಆಗುವುದಿಲ್ಲ ಎಂದು ವಾಟಾಳ್ ನಾಗರಾಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.