ಕನ್ನಡಪ್ರಭ ವಾರ್ತೆ ಮಡಿಕೇರಿ
ಸಂಪಾಜೆ ಸಮೀಪದ ಕೊಯನಾಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಂಟರು ಅಂತ ಇರುತ್ತಾರಲ್ಲ ಅವರು ಮಾತನಾಡುತ್ತಿದ್ದಾರೆ ಅಷ್ಟೇ. ಯಾರು ರಾಜಕಾರಣವನ್ನು ಅರ್ಥ ಮಾಡಿಕೊಂಡಿದ್ದಾರೆ. ಯಾರು ಪಕ್ಷಕ್ಕೆ ಶಿಸ್ತು ಬದ್ಧರಾಗಿದ್ದಾರೆ. ಅವರು ಯಾರು ಇದರ ಬಗ್ಗೆ ಮಾತನಾಡುತ್ತಿಲ್ಲ. ಅದರಿಂದ ಸಿಎಂ ಅಧಿಕಾರದ ವಿಷಯದಲ್ಲಿ ಯಾವುದೇ ಗೊಂದಲವೂ ಇಲ್ಲ. ಮುಂದೆ ಬಜೆಟ್ ಇರುವುದರಿಂದ ಅದರ ಬಗ್ಗೆ ಗಮನಹರಿಸುತ್ತೇವೆ. ಬದಲಾವಣೆಯ ಪ್ರಕ್ರಿಯೆಗಳೇ ಯಾವುದೂ ನಡೆದಿಲ್ಲ. ಆದ್ದರಿಂದ ಬದಲಾವಣೆ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಹುಡುಕಿದರೆ ಸಿಗಲ್ಲ ಎಂದು ಹೇಳಿದರು.
ಹೈಕಮಾಂಡ್ ಕರೆದರೆ ಸೂಕ್ತ ಸಮಯದಲ್ಲಿ ಹೋಗುತ್ತೇವೆ ಎಂದು ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಸರಿಯಾಗಿಯೇ ಇದೆ. ಹೈಕಮಾಂಡ್ ಈಗ ಕರೆದರು ಅವರಿಬ್ಬರು ಹೋಗಬೇಕು. ಆದರೆ ಹೈಕಮಾಂಡ್ ಇದುವರೆಗೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಚರ್ಚೆಗೆ ಆದ್ಯತೆ ನೀಡಲಾಗಿದೆ. ಪ್ರಶ್ನೋತ್ತರ ವೇಳೆ ಬಿಟ್ಟರೆ ಉಳಿದೆಲ್ಲಾ ಅವಧಿಯನ್ನು ಉತ್ತರ ಕರ್ನಾಟಕದ ಚರ್ಚೆಗೆ ಮೀಸಲಿರಿಸಲಾಗಿತ್ತು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗಿರುವ ಕೆಲಸಗಳ ಬಗ್ಗೆ ಚರ್ಚೆ ಆಗಿದೆ. ಗೋವಿಂದರಾವ್, ನಂಜುಂಡಪ್ಪ ವರದಿಗಳ ಪಾಲನೆ ಇವೆಲ್ಲವನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಕಾಟಾಚಾರಕ್ಕೆ ಅಂತ ವಿರೋಧ ಪಕ್ಷದವರು ಎರಡು ನಿಮಿಷ ಸದನದಿಂದ ಹೊರನಡೆದರು. ನಂತರ ವಾಪಸ್ ಬಂದು ಸದನ ನಡೆಯಿತು. ಒಳಮೀಸಲಾತಿ, ದ್ವೇಷ ಭಾಷಣ ನಿಷೇಧ ಕಾಯ್ದೆ ಇವೆಲ್ಲವನ್ನೂ ಚರ್ಚೆ ಮಾಡಿ ಎರಡು ಮನೆಗಳಲ್ಲಿ ಒಪ್ಪಿಗೆ ಪಡೆಯಲಾಗಿದೆ. ತೃಪ್ತಿಕರವಾಗಿ ಸದನ ನಡೆದಿದೆ. ಇದಕ್ಕೆ ವಿರೋಧ ಪಕ್ಷಗಳ ಕೊಡುಗೆಯೂ ಇದೆ. ಕೇವಲ ಸದನದಿಂದ ಹೊರ ನಡೆಯುವುದನ್ನು ಮಾಡಲಿಲ್ಲ. ಒಟ್ಟಿನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದನ ಚರ್ಚಿಸಿದೆ ಎಂದು ತಿಳಿಸಿದರು. ದ್ವೇಷ ಭಾಷಣ ಕಾಯ್ದೆ ಚರ್ಚೆ ಸಂದರ್ಭ ಅದು ಸಾಬೀತಾಗಿದೆ. ದ್ವೇಷ ಭಾಷಣ ಕಾಯ್ದೆ ಜಾರಿಗೆ ಮುಕ್ತ ಚರ್ಚೆ ಆಗಬೇಕಾಗಿತ್ತು.ಅದಕ್ಕೆ ಸದನದಲ್ಲಿ ಅವಕಾಶವನ್ನು ನೀಡಲಾಗಿತ್ತು. ಕಾಯ್ದೆ ಚರ್ಚೆ ಸಂದರ್ಭ ವಿಪಕ್ಷ ನಾಯಕರು ಮಾತನಾಡುತ್ತಿದ್ದರು.
ಅತ್ತ ಅವರದೇ ಪಕ್ಷದ ಒಂದು ಗುಂಪು ಸದನದ ಬಾವಿಗಿಳಿಯಿತು. ಅವರಲ್ಲಿ ನಾಯಕತ್ವ ಇಲ್ಲ, ಒಗ್ಗಟ್ಟು ಇಲ್ಲ. ಸದನದ ಬಾವಿಗೆ ಇಳಿಯಬೇಕಾದರೆ ಶಾಸಕಾಂಗ ಪಕ್ಷದ ನಾಯಕರ ಆದೇಶ ಮೇರೆಗೆ ಆಗಬೇಕು. ಮತ್ತೊಂದೆಡೆ ಉಚ್ಛಾಟಿತ ಸದಸ್ಯರದೇ ಒಂದು ಗುಂಪಾಗಿದೆ.ಈ ರೀತಿಯಾಗಿ ವಿರೋಧ ಪಕ್ಷ ಛಿದ್ರ ಛಿದ್ರವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಬಲವಾದ ವಿರೋಧ ಪಕ್ಷ ಇರಬೇಕು. ದೇಶ, ರಾಜ್ಯ ಎಲ್ಲಾ ಕಡೆ ಪ್ರಬಲ ವಿರೋಧ ಪಕ್ಷ ಇರಬೇಕು. ಹೀಗಾಗಿ ಅವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಶಾಸಕ ಎ ಎಸ್ ಪೊನ್ನಣ್ಣ ವಿಪಕ್ಷಗಳಿಗೆ ಪಾಠ ಮಾಡಿದರು.