ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

KannadaprabhaNewsNetwork |  
Published : Dec 23, 2025, 02:30 AM IST
22ಎಚ್‌ಪಿಟಿ3- ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳ್ಳಾರಿ ಸಂಸದ ಈ.ತುಕಾರಾಂ ಅವರನ್ನು ಭೇಟಿಯಾಗಿ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಮನವಿಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಬೆಳಗಾವಿ- ಹೊಸಪೇಟೆ- ರಾಯಚೂರು- ಹೈದರಾಬಾದ್ (ಮಣಗೂರು) ರೈಲನ್ನು ಪುನರಾರಂಭಿಸಬೇಕು.

ಹೊಸಪೇಟೆ: ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳ್ಳಾರಿ ಸಂಸದ ಈ.ತುಕಾರಾಂ ಅವರನ್ನು ಭೇಟಿಯಾಗಿ ರೈಲ್ವೆ ಬೇಡಿಕೆಗಳ ಮನವಿ ಸಲ್ಲಿಸಿದರು.

ಬೆಳಗಾವಿ- ಹೊಸಪೇಟೆ- ರಾಯಚೂರು- ಹೈದರಾಬಾದ್ (ಮಣಗೂರು) ರೈಲನ್ನು ಪುನರಾರಂಭಿಸಬೇಕು. ಕಳೆದ ಎಂಟು ವರ್ಷಗಳಿಂದ ಸಂಚರಿಸುತ್ತಿದ್ದ ಈ ರೈಲನ್ನು ಕಳೆದ ಆರು ತಿಂಗಳ ಹಿಂದೆ ಯಾವುದೇ ಸಕಾರಣವಿಲ್ಲದೇ ರದ್ದುಗೊಳಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕದಿಂದ ಹೈದರಾಬಾದ್‌ಗೆ ನೇರ ಸಂಪರ್ಕ ಇಲ್ಲದಂತಾಗಿದೆ. ವಿಶೇಷವಾಗಿ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಪ್ರತಿನಿತ್ಯ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಅನಾನುಕೂಲವಾಗಿದೆ. ಈ ರೈಲನ್ನು ಮೊದಲಿದ್ದಂತೆ ಪುನರಾರಂಭಿಸಬೇಕು. ಇಲ್ಲವೇ ಹುಬ್ಬಳ್ಳಿ-ರಾಯಚೂರು ನಡುವೆ ನೂತನ ರೈಲು ಆರಂಭಿಸಿದರೆ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಆರಂಭಿಸಿದರೆ ವಿಶ್ವ ಪಾರಂಪರಿಕ ತಾಣವಾದ ಹಂಪಿ, ಹಾಸನ, ಬೇಲೂರು, ಹಳೇಬೀಡು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮುಂತಾದ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ದೊರೆಯುತ್ತದೆ. ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಸ್ಥಳಗಳಾದ ಉಡುಪಿ, ಕರಾವಳಿ ಬಂದರು ನಗರ ಮಂಗಳೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನಡುವೆ ಸಂಪರ್ಕ ಉಂಟಾಗಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಆ ಜಿಲ್ಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ಆಗ್ರಹಿಸಿದರು.

ಹೊಸಪೇಟೆ-ಸೊಲ್ಲಾಪುರದ ನಡುವೆ ಸಂಚರಿಸುತ್ತಿರುವ ರೈಲನ್ನು ಪಂಢರಪುರದವರೆಗೆ ವಿಸ್ತರಿಸಬೇಕು. ಈ ಭಾಗದ ಪಾಂಡುರಂಗ ವಿಠಲ ಭಕ್ತರ ಕೋರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣ, ಪಿಟ್‌ಲೈನ್ ನಿರ್ಮಾಣ ಹಾಗೂ ಎರಡು ನೂತನ ಪ್ಲಾಟ್ ಫಾರಂಗಳ ನಿರ್ಮಾಣ ಮಾಡಬೇಕು. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರವಾದ ಹೊಸಪೇಟೆಯು ಪ್ರವಾಸೋದ್ಯಮ ಮತ್ತು ಕೈಗಾರಿಕೆ ಬೆಳವಣಿಗೆ ಕೇಂದ್ರವಾಗಿದೆ. ದೇಶ ವಿದೇಶಗಳಿಂದ ಜನರು ರೈಲು ಮಾರ್ಗದ ಮೂಲಕ ಇಲ್ಲಿಗೆ ಆಗಮಿಸುತ್ತಿದ್ದಾರೆ. ರೈಲು ಗಾಡಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಎರಡು ಹೊಸದಾಗಿ ಪ್ಲಾಟ್ ಫಾರಂ ಹಾಗೂ ಪಿಟ್‌ಲೈನ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಜಯನಗರ ರೈಲು ಬಳಕೆದಾರರ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡತಿನಿ, ಮುಖಂಡರಾದ ದೀಪಕ್ ಉಳ್ಳಿ, ಜೀರ ಕಲ್ಲೇಶ್, ಪ್ರಭಾಕರ್, ಎಂ.ಶಂಕ್ರಪ್ಪ, ಕೆ.ವಿ.ರಾಮಾಲಿ, ಆರ್.ರಮೇಶ್‌ಗೌಡ, ನಜೀರ್ ಸಾಬ್, ಶ್ರವಣ್‌ಕುಮಾರ್, ಜೆ.ವರುಣ್, ಮನೋಹರ್, ಕೃಷ್ಣಮೂರ್ತಿ ರಾವ್, ನಾಗರಾಜರಾವ್, ಅರುಣ್‌ಕುಮಾರ್, ಶ್ರೀನಿವಾಸರಾವ್, ಅಮರನಾಥ್ ಕಟಾರೆ, ಹರಿಶಂಕರರಾವ್ ಮತ್ತಿತರರಿದ್ದರು.

ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳ್ಳಾರಿ ಸಂಸದ ಈ.ತುಕಾರಾಂ ಅವರನ್ನು ಭೇಟಿಯಾಗಿ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾರತಮ್ಯ ಹೋಗಲಾಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ: ಶಾಸಕ ಭೀಮಣ್ಣ ನಾಯ್ಕ
ತುಂಗಭದ್ರಾ ನದಿ ಮುಂದಿನ ಪೀಳಿಗೆಗಾಗಿ ರಕ್ಷಿಸಿ: ಶಿವರಾಜ ತಂಗಡಗಿ