ಕಾರಟಗಿ: ಕೋಟ್ಯಂತರ ಜನರ ಜೀವನಾಡಿ, ಕುಡಿಯುವ ನೀರು, ಕೃಷಿ, ಉದ್ಯಮಕ್ಕೆ ಮೂಲಧಾತು ತುಂಗಭದ್ರಾ ನದಿಯ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಕೋಟಿ ಕೋಟಿ ಜನತೆಯ ಜೀವನಾಡಿ ತುಂಗಭದ್ರಾ ನದಿಯನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಿಟ್ಟುಕೊಳ್ಳವ ಅನಿವಾರ್ಯತೆಯ ಪರಿಸ್ಥಿತಿಯಲ್ಲಿ ಇದ್ದೇವೆ. ಇತ್ತೀಚಿಗೆ ನದಿಯು ಕಲುಷಿತಗೊಂಡು ಕುಡಿಯಲೂ ಯೋಗ್ಯವಿಲ್ಲ ಎನ್ನುವ ವರದಿಗಳು ಪ್ರಕಟವಾಗಿರುವುದು ಆತಂಕ ಹುಟ್ಟಿಸಿದೆ. ಈ ವರದಿಯು ನದಿಯ ಜತೆಗೆ ಕೋಟ್ಯಂತರ ಜನರ ಬದುಕಿಗೆ ಅಷ್ಟೇ ಅಲ್ಲ, ಲಕ್ಷಾಂತರ ಜೀವರಾಶಿಗಳ ಬದುಕಿನ ಪ್ರಶ್ನೆ ಎದುರಾಗಿದೆ. ಹೀಗಾಗಿ ನದಿಯನ್ನು ಅತ್ಯಂತ ಜತನದಿಂದ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಿ ನಿರ್ಮಲ ತುಂಗಭದ್ರೆಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ಅಭಿಯಾನದಿಂದ ಡಿ. 27ರಿಂದ ಕಿಷ್ಕಿಂದೆಯಿಂದ ಮಂತ್ರಾಲಯದ ವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಅಭಿಯಾನ ಡಿ. 27ರಂದು ರಾತ್ರಿ ಪಟ್ಟಣಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ಡಿ. 28ರಂದು ಬೆಳಗ್ಗೆ ಸಾರ್ವಜನಿಕವಾಗಿ ಬಹಿರಂಗ ಸಭೆ ನಡೆಯಲಿದೆ ಎಂದರು.
ಪಾದಯಾತ್ರೆಯ ಸಂಚಾಲಕ ಡಾ. ಶಿವಕುಮಾರ ಗಂಗಾವತಿ ಮಾತನಾಡಿ, ನಮ್ಮೆಲ್ಲರ ಜೀವನಾಡಿಯಾಗಿರುವ ತುಂಗಭದ್ರಾ ನದಿಯು ಇಂದು ಮಿತಿ ಮೀರಿದ ಮಾಲಿನ್ಯದಿಂದ ಅಲ್ಲಿನ ನೀರನ್ನು ಕುಡಿಯಲು ಕೂಡಾ ಯೋಗ್ಯವಿಲ್ಲದಂತಹ ದುಸ್ಥಿತಿಗೆ ದೂಡಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ನಾವೆಲ್ಲರೂ ನಿರ್ಮಲ ತುಂಗಭದ್ರೆಗಾಗಿ, ಅದರ ಸ್ವಚ್ಛತೆಗೆ ಹೋರಾಡಬೇಕಿದೆ ಎಂದರು.ಈ ನಿಟ್ಟಿನಲ್ಲಿ ಜನ ಜಾಗೃತಿ, ಜಲ ಜಾಗೃತಿಗಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.