ಕನ್ನಡಪ್ರಭ ವಾರ್ತೆ ಆಲೂರು
ಸರ್ಕಾರಿ ಶಾಲೆಗಳು ಎಲ್ಲಿಯವರೆಗೆ ಇರುತ್ತವೋ, ಅಲ್ಲಿಯವರೆಗೆ ಕನ್ನಡ ಭಾಷೆಗೆ ಆಪತ್ತು ಬರುವುದಿಲ್ಲ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಅಭಿಪ್ರಾಯಪಟ್ಟರು.ತಾಲೂಕಿನ ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಣತೂರು ಶಾಲೆ ಎಂದರೆ ಇಡೀ ತಾಲೂಕು, ಜಿಲ್ಲೆ ಅಲ್ಲದೇ ರಾಜ್ಯಮಟ್ಟದಲ್ಲಿಯೂ ಕೂಡ ಹೆಸರುವಾಸಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಶಿಕ್ಷಕರ ಶ್ರಮ ಮತ್ತು ಅವರ ಆಸಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಕೂಡ ನಾಕಲಗೂಡು ಗ್ರಾಮದಲ್ಲಿ ಜನಿಸಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದು ನನ್ನನ್ನು ಕರೆದು ಸನ್ಮಾನಿಸುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ನನಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಹಲವು ಸಂಘ- ಸಂಸ್ಥೆಗಳು ಸನ್ಮಾನಿಸಿವೆ. ಆದರೆ, ಆ ಎಲ್ಲದಕ್ಕಿಂತ ನಾನು ಕಲಿತ ಶಾಲೆ ನನ್ನನ್ನು ಗುರುತಿಸಿ, ಗೌರವಿಸಿರುವುದು ನನ್ನ ಜೀವನದಲ್ಲಿ ಮರೆಯಲಾಗದ ಅತ್ಯಮೂಲ್ಯ ಕ್ಷಣವಾಗಿದೆ ಎಂದು ಬಣ್ಣಿಸಿದರು.ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವುದಾಗಿ ಮತ್ತು ಮುಂದಿನ ವರ್ಷದೊಳಗೆ ಈ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನಟರಾಜ್ ನಾಕಲಗೂಡು, ಮಕ್ಕಳಲ್ಲಿ ಇರುವಂತಹ ಕೌಶಲ್ಯ ಮತ್ತು ಅವರ ಆಸಕ್ತಿದಾಯಕ ವಿಚಾರಗಳನ್ನು ಮತ್ತು ಅವರ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಸರ್ಕಾರಿ ಶಾಲೆಗಳು ಮುಂಚೂಣಿಯಲ್ಲಿವೆ. ಅದರಲ್ಲಿಯೂ ಕೂಡ ನಮ್ಮ ಕಣತ್ತೂರು ಶಾಲೆಯು ತಾಲೂಕಿನಲ್ಲೇ ಮಾದರಿಯಾಗಿದೆ ಎಂದು ಹೇಳಿದರು.ಪ್ರತಿ ವರ್ಷವೂ ಕೂಡ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ವಿಭಾಗದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿಯೂ ಕೂಡ ಇಲ್ಲಿನ ಮಕ್ಕಳು ಭಾಗವಹಿಸಿ ಪ್ರಶಸ್ತಿ ಬಾಚುವ ಮೂಲಕ ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಈ ಭಾಗದ ಜನರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಸಹಕಾರ ನೀಡಬೇಕು ಎಂದು ಹೇಳಿದರು.
ತಾಲೂಕು ನೌಕರ ಸಂಘದ ಅಧ್ಯಕ್ಷ ವರದರಾಜ್ ಮಾತನಾಡಿ, ಕಿರಿ ಹಾಲೂರು ತಾಲೂಕಿನಲ್ಲಿ ಕಣತೂರು ಸರ್ಕಾರಿ ಶಾಲೆ ಮಾದರಿಯಾಗಿದೆ. ಇಲ್ಲಿನ ಶಿಕ್ಷಣ ಮತ್ತು ಶಿಕ್ಷಕರ ಶ್ರಮ ಹೆಚ್ಚಿದೆ, ಶಿಕ್ಷಕರು ಸಾಕಷ್ಟು ಶ್ರಮವಹಿಸಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಇದರಿಂದ ಈ ಶಾಲೆ ಸಾಕಷ್ಟು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಲು ಪೋಷಕರೂ ಕೂಡ ಹೆಚ್ಚು ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾ ಡಿ. ರಾಮ್, ಸದಸ್ಯೆ ಪದ್ಮಾ ಜಗದೀಶ್, ಶಿಕ್ಷಕರಾದ ಧರ್ಮ, ಎಂ.ಆರ್.ಚಂದ್ರಮ್ಮ, ಬಿ.ಎಸ್.ಹಿಮಾ, ಪ್ರಮೀಳಾ, ರಾಜೇಶ್ವರಿ, ಶೋಭಾ, ಪುಟ್ಟಸ್ವಾಮಿ, ಎಸ್ ಡಿಎಂಸಿ ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ಪುಪ್ಪು ನಂದನ್, ಸದಸ್ಯರಾದ ಯತೀಶ್ ವಿರೂಪಾಕ್ಷ, ರಮೇಶ ಸೇರಿ ಇತರರು ಹಾಜರಿದ್ದರು.-------