ಚಿಕ್ಕಮಗಳೂರು: ತನ್ನ ಅಲ್ಪ ಆಯಸ್ಸಿನಲ್ಲಿ ಇಡೀ ದೇಶ ಗೌರವಿಸುವಂತೆ ಬದುಕು ಸಾಗಿಸಿ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಪುನೀತ್ ರಾಜ್‌ಕುಮಾರ್ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ಪುನೀತ್ ಅವರ ಜನ್ಮ ದಿನದ ಪ್ರಯುಕ್ತ ನಗರದ ಕುವೆಂಪು ಕಲಾ ಮಂದಿರದಲ್ಲಿ ಶ್ರೀ ಹರಿ ಮೆಲೋಡಿಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಂತರ್ ಜಿಲ್ಲಾ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಹುತೇಕ ಚಲನಚಿತ್ರ ನಟರಿಗೆ ತನ್ನದೇಯಾದ ಅಭಿಮಾನಿಗಳಿದ್ದಾರೆ. ಆದರೆ, ಪುನೀತ್ ರಾಜ್‌ಕುಮಾರ್ ಅವರು ಸಣ್ಣ ಮಕ್ಕಳಿಂದ ವೃದ್ಧರವರೆಗೆ ಅಭಿಮಾನಗಳಿಸಿದ್ದಾರೆ. ರಾಜ್ಯದಲ್ಲಿ ಎತ್ತ ಸಾಗಿದರೂ ಪುನೀತ್‌ರಾಜ್‌ಕುಮಾರ್ ಅವರು ಮತ್ತೆ ಹುಟ್ಟಿ ಬಾ ಎಂದು ಅಭಿಮಾನಿಗಳು ಹಾಕಿರುವ ಭಾವಚಿತ್ರ ರಾರಾಜಿಸುತ್ತಿರುವುದು ಇದಕ್ಕೆ ಸಾಕ್ಷಿ. ಅವರ ಹುಟ್ಟು ಹಬ್ಬದ ದಿನ ಶ್ರೀಹರಿ ಮೆಲೋಡಿಸ್ ಪುನೀತ್ ಅವರ ಹೆಸರಿನಲ್ಲಿ ಗಾಯನ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಹಣದಿಂದ ಏನು ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಶಿಕ್ಷಣ, ಸಂಗೀತ ಸೇರಿದಂತೆ ನಾನಾ ಬಗೆಯ ಕಲೆ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಸರಸ್ವತಿ ಕೂಡ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಶ್ರೀಮಂತ, ಬಡವ ಎಂಬ ಬೇಧ ಭಾವವಿಲ್ಲ. ಹಾಗಾಗಿ ಇಂದು ಗ್ರಾಮೀಣ ಭಾಗದ ಬಡ ಜನರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.ಶ್ರೀಹರಿ ಮೆಲೋಡಿಸ್‌ನ ಮುಖ್ಯಸ್ಥೆ ಹರಿಣಾಕ್ಷಿ ಮಾತನಾಡಿ, ಸಂಗೀತ ಪ್ರಿಯರಿಗೆ ಅವಕಾಶಗಳು ದೊರಕಿದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗಾಗಿ ಈ ಗಾಯನ ಸ್ಪರ್ಧೆ ಕಲಾವಿದರಿಗೆ ಮುಖ್ಯ ವೇದಿಕೆಯಾಗಲಿದೆ. ಸೋಲು ಗೆಲುವು ಸಾಮಾನ್ಯ. ಸಂಗೀತ ಸ್ಪರ್ಧೆಯಲ್ಲಿ ಸೋತವರು ಮತ್ತು ಗೆದ್ದವರು ಹಿಗ್ಗದೇ ಹಾಗೂ ಕುಗ್ಗದೇ ನಿರಂತರ ಕಲಿಕೆಯಲ್ಲಿ ಸಾಗಬೇಕು. ಸಂಗೀತದಲ್ಲಿ ಎಷ್ಟೇ ಪರಿಣಿತರಾದರೂ ಎಲ್ಲಾ ಗೀತೆಗಳನ್ನು ಹಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿರಂತರ ಶ್ರಮ ಅಗತ್ಯ ಎಂದು ಹೇಳಿದರು. ಬೆಂಗಳೂರು, ಮೈಸೂರು, ತುಮಕೂರು, ಕಾರವಾರ, ಕುಂದಾಪುರ, ಮಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸರಿಗಮಪ ಝೀ ವಾಹಿನಿಯ ನರಹರಿ ದೀಕ್ಷಿತ್, ಹಿರಿಯ ಸಂಗೀತ ಶಿಕ್ಷಕಿ ನಿವೇದಿತ ಗಜೇಂದ್ರ, ಜಾನಪದ ಚಿಂತಕ ಬಕ್ತನಕಟ್ಟೆ ಲೋಕೇಶ್, ಮಂಗಳೂರಿನ ಆದಿತ್ಯ ಕರ್ಕೇರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಂದಿಯ ಅವಿನಾಶ್, ದ್ವಿತೀಯ ಸ್ಥಾನವನ್ನು ತುಮಕೂರಿನ ಹೇಮಂತ್, ತೃತೀಯ ಸ್ಥಾನ ಬೆಂಗಳೂರಿನ ರವಿಶಾಸ್ತ್ರಿ ಪಡೆದರು. ಕಾರ್ಯಕ್ರಮದಲ್ಲಿ ಪತ್ರಕರ್ತ ರಾಘವೇಂದ್ರ ಕೆಸವೊಳಲು, ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಗಣೇಶ್ ಮಗ್ಗಲಮಕ್ಕಿ, ಚಂದ್ರು ಒಡೆಯರ್, ಶ್ರೀಹರಿ ಮೆಲೋಡಿಸ್‌ನ ಅಂಬಾವತಿ ಶೆಟ್ಟಿ, ಬಕ್ಕಿ ರವೀಂದ್ರ, ಚಂದ್ರು ಸಾಲಿಯಾನ್, ಉಮೇಶ್ ಮಲ್ಲೇನಹಳ್ಳಿ, ಸುರೇಶ್ ಬಿಳಗುಳ, ಶೃತಿ, ಬಕ್ಕಿ ಮಂಜು ಉಪಸ್ಥಿತರಿದ್ದರು.---------------19 ಕೆಸಿಕೆಎಂ 5ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಶ್ರೀ ಹರಿ ಮೆಲೋಡಿಸ್ ವತಿಯಿಂದ ಏರ್ಪಡಿಸಿದ್ದ ಅಂತರ್ ಜಿಲ್ಲಾ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು.