ಜಾತಿಗಣತಿ ಕಾರ್ಯಕ್ಕೆ ಅಪಸ್ವರ ಸಲ್ಲದು

KannadaprabhaNewsNetwork |  
Published : Oct 10, 2025, 01:00 AM IST
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು.   | Kannada Prabha

ಸಾರಾಂಶ

ಮಾದಿಗರ ಸಂಖ್ಯೆ ಕುಗ್ಗಿಸಲು ಯತ್ನ: ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಬದ್ಧತೆಯಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ರಾಜ್ಯದ ಪ್ರಗತಿಗೆ ದಾರಿ ಆಗಲಿದೆ. ಆದ್ದರಿಂದ ಯಾರೊಬ್ಬರೂ ಅಪಸ್ವರ ಮಾಡದೆ ಎಲ್ಲ ಜಾತಿ ಜನರು ಪಾಲ್ಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ರಾಜ್ಯ ಅಭಿವೃದ್ಧಿಗೊಳ್ಳಬೇಕಾದರೆ, ಅಲ್ಲಿನ ಜನರ ಸ್ಥಿತಿಗತಿ ಅರಿತುಕೊಳ್ಳಬೇಕು. ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ, ಅವರ ಹಿಂದುಳಿಯುವಿಕೆ ಸೇರಿ ವಿವಿಧ ಅಂಶಗಳ ಮಾಹಿತಿ ಅಗತ್ಯ. ಆಗ ಮಾತ್ರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು.

ಯಾವ ಸಮುದಾಯದ ಬಳಿ ಎಷ್ಟು ಸಂಪತ್ತು ಇದೆ, ಇಲ್ಲದ ವರ್ಗ ಯಾವುದು, ಶಿಕ್ಷಣ ಪ್ರಗತಿ ಹೀಗೆ ವಿವಿಧ ರೀತಿ ಮಾಹಿತಿ ರಾಜ್ಯ ಸರ್ಕಾರದ ಬಳಿಯಿದ್ದಾಗ ಮಾತ್ರ ಹಿಂದುಳಿದ ಜಾತಿ ಜನರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಅ.18ರ ವರೆಗೆ ಸಮೀಕ್ಷೆ ವಿಸ್ತರಣೆ ಮಾಡಿರುವುದು ಉತ್ತಮ ನಡೆ ಆಗಿದೆ. ರಾಜ್ಯದಲ್ಲಿ ಮಾದಿಗರ ಸಂಖ್ಯೆ ಕುಗ್ಗಿಸುವ ಕುತಂತ್ರ ನಡೆಯುತ್ತಿದೆ. ಇಂತಹ ವೇಳೆ ನಾವು ಹೆಚ್ಚು ಜಾಗೃತಿ ವಹಿಸಬೇಕು. ಹೋರಾಟಗಾರರು ಎಚ್.ಸಿ.ಮಹಾದೇವಪ್ಪ ಸೇರಿ ವಿವಿಧ ಮಂತ್ರಿಗಳ ಮನೆಗಳಿಗೆ ಮುತ್ತಿಗೆ ನಡೆ ಕೈಬಿಟ್ಟು, ಜಾತಿಗಣತಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.

ಈ ಹಿಂದೆ ಕಾಂತರಾಜ್ ಆಯೋಗ ವೈಜ್ಞಾನಿಕ ವರದಿ ನೀಡಿತ್ತು. ಆದರೆ 10 ವರ್ಷ ಹಳೆಯದ್ದಾಗಿದೆಯೆಂಬ ಆರೋಪ ಕೇಳಿಬಂದಿದ್ದರಿಂದ ಮತ್ತೊಮ್ಮೆ ಸಮೀಕ್ಷೆ ಕಾರ್ಯವನ್ನು ಸರ್ಕಾರ ನಡೆಸುತ್ತಿದೆ. ಈ ಕಾರ್ಯಕ್ಕೆ ಆರಂಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ವಾಸ್ತವತೆ ಅರಿತು ಎಲ್ಲರೂ ಪಾಲ್ಗೊಳ್ಳುವುದು ಸ್ವಾಗತರ್ಹ ನಡೆ ಎಂದು ತಿಳಿಸಿದರು.

ಮಾದಿಗರು ಸೇರಿ ಎಲ್ಲ ಸಮುದಾಯಗಳು ಮನೆ, ಮಕ್ಕಳಿಗೆ ಶಿಕ್ಷಣ, ಗಂಗಕಲ್ಯಾಣ ಯೋಜನೆಯಡಿ ಕೊಳವೆಬಾವಿ, ಸಾಲ ಸೌಲಭ್ಯ ಹೀಗೆ ಸವಲತ್ತು ಪಡೆಯಲು ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದರು.

ಒಳ ಮೀಸಲಾತಿ ಜಾರಿ ವಿಷಯದಲ್ಲಿ ಎಕೆ, ಎಎ, ಎಡಿ ಜಾತಿ ಸೂಚಕ ವರ್ಗದಲ್ಲಿ ಗುರುತಿಸಿಕೊಂಡಿದ್ದವರು, ಎ ಅಥವಾ ಬಿ ಗುಂಪಿನಲ್ಲಿ ಗುರುತಿಸಿಕೊಳ್ಳಲು ಕಡ್ಡಾಯವಾಗಿ ಜಾತಿ ಘೋಷಣೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಅವರು ಮೀಸಲಾತಿ ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಹೊಲಯ-ಮಾದಿಗ ಅದಲು-ಬದಲು ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಒಂದೊಮ್ಮೆ ಕಳ್ಳದಾರಿಯಲ್ಲಿ ನಮ್ಮ ಗುಂಪಿಗೆ ಪ್ರವೇಶಿಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಿ, ಶಿಕ್ಷೆ ಆಗುವವರೆಗೂ ವಿರಮಿಸುವುದಿಲ್ಲ ಎಂದರು.

ದಕ್ಷಿಣ ಕನ್ನಡದಲ್ಲಿ ಎಡಿ ಜಾತಿ ಸೂಚಕ ಜನರನ್ನು ಬಿ ಗುಂಪಿನಲ್ಲಿ ಗುರುತಿಸಲಾಗಿದೆ. ಆದ್ದರಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ಗೊಂದಲಗಳು ಇಲ್ಲ. ಅನಗತ್ಯವಾಗಿ ಸುಳ್ಳು ವದಂತೆಗಳಿಗೆ ಕಿವಿಗೊಡದೆ ಮೀಸಲು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಉದ್ಯೋಗಸ್ಥರನ್ನಾಗಿ ಮಾಡಲು ಶ್ರಮಿಸಬೇಕೆಂದು ತಿಳಿಸಿದರು.

ಕಾಡುಗೊಲ್ಲರು ಈಗ ಜಾಗೃತಗೊಂಡಿದ್ದು, ಅವರು ಜಾತಿ ಕಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಈ ಕಾರ್ಯ ಸ್ವಾಗತರ್ಹ. ಒಟ್ಟಾರೆ ಅರ್ಧ ಗಂಟೆ ಸಮೀಕ್ಷೆಯಲ್ಲಿ ಪಾಲ್ಗೊಂಡರೇ ನಮ್ಮ ಭವಿಷ್ಯದ ಪೀಳಿಗೆಗೆ ಸರ್ಕಾರಿ ಸೌಲಭ್ಯ ದೊರೆಯಲಿದೆ ಎಂದರು.

ಹೋರಾಟಗಾರರು ಸದಾ ಚಳವಳಿ ನಡೆಸುವುದು ಅವರ ಬದ್ಧತೆ. ಮುಂದಿನ ದಿನಗಳಲ್ಲಿಯೂ ಹೋರಾಟ ನಡೆಸಬಹುದು. ಆದರೆ ಅನಗತ್ಯವಾಗಿ ಸಚಿವ ಎಚ್.ಸಿ.ಮಹಾದೇವಪ್ಪ ಸೇರಿ ಅನೇಕರ ಮನೆಗೆ ಮುತ್ತಿಗೆ ಹಾಕುವುದರಿಂದ ಕಾಲಹರಣ ಆಗಲಿದೆ ಎಂದು ಆಂಜನೇಯ ಬೇಸರಿಸಿದರು. ಈಗ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ಸಮುದಾಯದ ಪ್ರತಿ ವ್ಯಕ್ತಿ ಪಾಲ್ಗೊಳ್ಳುವ ರೀತಿ ಜಾಗೃತಿ ಮೂಡಿಸಲು ಹಳ್ಳಿ, ಸ್ಲಂ, ಎಕೆ, ಎಸ್‌ಸಿ, ಮಾದಿಗರ ಹಟ್ಟಿಗಳಿಗೆ ತೆರಳಬೇಕು. ಅ.18ರ ಬಳಿಕ ನೀವು ಹೋರಾಟ ಮಾಡಿದರೆ ನಮ್ಮ ಅಭ್ಯಂತರ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಮಾಜಿ ಸದಸ್ಯ ಆರ್.ನರಸಿಂಹರಾಜು,

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ವಕೀಲರಾದ ಶರಣಪ್ಪ, ಸಿ.ಎಸ್.ರವೀಂದ್ರ, ಮುಖಂಡರಾದ ಅನಿಲ್ ಕೋಟಿ, ಚೇತನ್ ಎಚ್.ಬೋರೇನಹಳ್ಳಿ, ಪ್ರಸನ್ನ ಜಯಣ್ಣ ಇತರರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ