ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ಇಲ್ಲ: ಯೋಗೇಶ್ವರ್‌

KannadaprabhaNewsNetwork | Published : Jul 2, 2025 11:52 PM
ಪೋಟೊ೨ಸಿಪಿಟಿ2: ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಸಿ.ಪಿ. ಯೋಗೇಶ್ವರ್ ಗುದ್ದಲಿಪೂಜೆ ನೇರವೇರಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಸಿಎಂ ಬದಲಾವಣೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆ ರೀತಿಯ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಅವರೇ ಪ್ರಸ್ತಾಪ ಮಾಡಿರೋದರಿಂದ ಅಂತಹ ಬೆಳವಣಿಗೆ ಏನು ಇಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಚನ್ನಪಟ್ಟಣ: ಸಿಎಂ ಬದಲಾವಣೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆ ರೀತಿಯ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಅವರೇ ಪ್ರಸ್ತಾಪ ಮಾಡಿರೋದರಿಂದ ಅಂತಹ ಬೆಳವಣಿಗೆ ಏನು ಇಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಇಕ್ಬಾಲ್ ಹುಸೇನ್ ಎಮೋಷನಲ್ ಆಗಿ ಏನೋ ಮಾತನಾಡಿದ್ದಾರೆ. ಸ್ವಾಭಾವಿಕವಾಗಿ ಎಲ್ಲರೂ ಅವರವರ ಅಭಿಪ್ರಾಯ ಹೇಳಿರುತ್ತಾರೆ. ಇಕ್ಬಾಲ್ ಹುಸೇನ್ ಮುಂದುವರಿದು ಮಾತನಾಡಿದ್ದಾರೆ.

ನಮ್ಮ ಜಿಲ್ಲೆ ಮೇಲಿನ ಪ್ರೀತಿಯಿಂದ ಕೇಳಿದ್ದಾರೆ. ಆದರೆ ಬದಲಾವಣೆ ಬಗ್ಗೆ ಸದ್ಯಕ್ಕೆ ಚರ್ಚೆ ಇಲ್ಲ ಅನಿಸುತ್ತೆ. ಅವಕಾಶ ಸಿಕ್ಕಿದರೆ ಡಿ.ಕೆ.ಶಿವಕುಮಾರ್ ಕೂಡಾ ಸಿಎಂ ಆಗಲಿ ಎಂಬುದು ನಮ್ಮೆಲ್ಲರ ಬಯಕೆ. ಅವರಿಗೆ ಅವಕಾಶ ಸಿಗಲಿ. ಆದರೆ ಈ ಬಗ್ಗೆ ಸುರ್ಜೇವಾಲ ಜೊತೆ ಯಾವುದೇ ಚರ್ಚೆ ಆಗಿಲ್ಲ. ಅವರು ಬದಲಾವಣೆಯ ಯಾವುದೇ ಮಾತುಗಳನ್ನಾಡಿಲ್ಲ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲರಿಂದ ಶಾಸಕರ ಕುಂದುಕೊರತೆ ಆಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಸುರ್ಜೇವಾಲ ನಮ್ಮನ್ನ ಕರೆದಿದ್ದರು. ನಾನು ಮೊದಲ ಬಾರಿಗೆ ಅವರನ್ನ ಭೇಟಿಯಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದೇವೆ. ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಸಿಗ್ತಿದೆ, ಕೊರತೆ ಇಲ್ಲ ಅಂತ ಹೇಳಿದ್ದೇನೆ. ಅವರು ಬೇರೆ ಏನು ಪ್ರಶ್ನೆ ಮಾಡಲಿಲ್ಲ ಎಂದರು.

ಸೆಪ್ಟೆಂಬರ್ ಬಳಿಕ ಕ್ರಾಂತಿ ಎಂಬ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತಹ ಯಾವುದೇ ಕ್ರಾಂತಿ ಇದ್ದರೆ ನಮ್ಮ ರಾಜ್ಯಾಧ್ಯಕ್ಷರೇ ತಿಳಿಸುತ್ತಾರೆ. ಆದರೆ ಆ ರೀತಿ ಏನು ಇಲ್ಲ ಅಂತ ಡಿಕೆಶಿ ಅವರೇ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಊಹಾಪೋಹ ಯಾವುದೂ ಇಲ್ಲ. ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾವೇರಿ ಬಾಗಿನದ ವೇಳೆ ಸಿಎಂ-ಡಿಸಿಎಂ ಒಟ್ಟಾಗಿ ನಿಂತಿದ್ದರು. ಇಬ್ಬರೂ ಹಸನ್ಮುಖಿಯಾಗಿ ಮಾತನಾಡುತ್ತಿದ್ದರು. ಸದ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಇಬ್ಬರೂ ಜೊತೆಯಲ್ಲಿ ಸರ್ಕಾರ ನಡೆಸ್ತಿದ್ದಾರೆ ಎಂದರು.

ಶಾಸಕರಿಗೆ ಸಚಿವರು ಸ್ಪಂದಿಸದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಎಲ್ಲಾ ಪಕ್ಷದಲ್ಲೂ, ಎಲ್ಲಾ ಸರ್ಕಾರದಲ್ಲೂ ಇರುವ ವಿಚಾರ. ಈ ರೀತಿ ಭಿನ್ನಾಭಿಪ್ರಾಯ ಇರುತ್ತೆ. ಇದೆಲ್ಲವನ್ನೂ ಮೀರಿ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಸದ್ಯ ನಾನು ರಾಜ್ಯ ರಾಜಕಾರಣದಲ್ಲಿ ಅಷ್ಟು ಆಕ್ಟೀವ್ ಆಗಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

ಬಾಕ್ಸ್‌..........

ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ವೇಗ

ಚನ್ನಪಟ್ಟಣ: ಈ ಹಿಂದೆ ಉಪ ಚುನಾವಣೆ ವೇಳೆ ತಾಲೂಕಿನ ಜನತೆಗೆ ನೀಡಿದ ಆಶ್ವಾಸನೆಯಂತೆ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ವೇಗ ನೀಡಲಾಗುತ್ತಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಚಕ್ಕೆರೆ, ಸಿದ್ದಾಪುರ, ತೆಂಕನಹಳ್ಳಿ, ಲಂಬಾಣಿ ತಾಂಡ್ಯ ಸೇರಿದಂತೆ ಹಲವೆಡೆಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕ, ಡ್ರೈನೇಜ್ ಸೇರಿದಂತೆ ಬಹುಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನನ್ನ ಹುಟ್ಟೂರು ಚಕ್ಕೆರೆ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ, ಡ್ರೈನೇಜ್ ನಿರ್ಮಾಣಕ್ಕಾಗಿ ಒಂದು ಕೋಟಿ ಹಣ ಬಿಡುಗಡೆ ಮಾಡಿದ್ದು, ಇಂದು ಅದಕ್ಕೆ ಗುದ್ದಲಿಪೂಜೆ ನೆರವೇರಿಸುತ್ತಿದ್ದೇನೆ. ಜೊತೆಗೆ ಗ್ರಾಮದಲ್ಲಿನ ವಸತಿರಹಿತರಿಗೆ ಗ್ರಾಮದ ಪಕ್ಕದಲ್ಲೆ ಖಾಸಗಿ ಜಮೀನು ಖರೀದಿಸಿ ನಿವೇಶನ ನೀಡುವ ಬಗ್ಗೆಯು ಮಾತುಕತೆಗಳನ್ನಾಡುತ್ತಿದ್ದು ಈ ಕೆಲಸ ಸಹ ಅಂತಿಮ ಹಂತದಲ್ಲಿದೆ ಎಂದರು.

ಉಪ ಚುನಾವಣೆಗೂ ಮುನ್ನ ತಾಲೂಕಿಗೆ ಕಾಂಗ್ರೆಸ್ ಸರಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಬಳಿಕ ಉಪ ಚುನಾವಣೆ ನಡೆದು ನಾನು ಶಾಸಕನಾಗಿ ಆಯ್ಕೆಯಾಗಿದ್ದು, ಇದೀಗ ಆ ಎಲ್ಲಾ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಜಾರಿಗೊಳಿಸಿ ತಾಲೂಕಿನ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಕಾರ್ಯಪ್ರವೃತ್ತನಾಗಿರುವುದಾಗಿ ಹೇಳಿಕೊಂಡರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಸಿ.ಪಿ.ರಾಜೇಶ್, ಚಕ್ಕೆರೆ ಗ್ರಾಪಂ ಅಧ್ಯಕ್ಷ ರಾಜಣ್ಣ, ಪ್ರಧಾನ ರಾಜಣ್ಣ, ಸಿ.ಪಿ.ಕೃಷ್ಣ, ಪ್ರದೀಪ್, ಬ್ಯಾಡರಹಳ್ಳಿ ರಾಮಚಂದ್ರು ಇತರರು ಹಾಜರಿದ್ದರು.

ಪೋಟೊ೨ಸಿಪಿಟಿ2:

ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಗುದ್ದಲಿಪೂಜೆ ನೇರವೇರಿಸಿದರು.

PREV