ಚಳ್ಳಕೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗ ಚುನಾವಣೆ ಕಾರ್ಯದಲ್ಲಿ ನಿರತವಾಗಿದ್ದರೂ ಸಹ ಸಾರ್ವಜನಿಕರ ಸಂಕಷ್ಟ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿ ನೇಮಿಸಿ ಅವರ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಲ್ಲರೂ ಸಹಕಾರ ನೀಡುವಂತೆ ತಾಲೂಕು ನೋಡಲ್ ಅಧಿಕಾರಿ ರಾಮಾಂಜನೇಯ ಕೋರಿದರು.
ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಿರೀಕ್ಷೆಯಂತೆ ಈ ಬಾರಿ ಇನ್ನೂ ಮಳೆ ಆರಂಭವಾಗಿಲ್ಲ. ಆದರೆ, ಕುಡಿಯುವ ನೀರೂ ಸೇರಿದಂತೆ ಇನ್ನಿತರೆ ಸೌಲಭ್ಯಗಳಿಗೆ ಸಾರ್ವಜನಿಕರು ಸರ್ಕಾರದತ್ತ ಎದುರು ನೋಡುತ್ತಿದ್ದಾರೆ. ಜಾನುವಾರುಗಳು ಸಹ ಮೇವು, ನೀರಿಲ್ಲದ ಸಂಕಷ್ಟಕ್ಕೆ ಈಡಾಗಬಹುದಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ನೇಮಿಸಿ ಹಂತ, ಹಂತವಾಗಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಮಸ್ಯೆ ಉಲ್ಬಣವಾಗುವ ಮುಂಚೆ ತಿಳಿಸಿದರೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೬೦ ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಿಗೂ ಸೂಕ್ತ ಸೌಲಭ್ಯ ಕಲ್ಪಿಸುವ ಜೊತೆಗೆ ಪಿಡಿಒ, ವಿಎಗಳು ಈ ಕೆಲಸವನ್ನು ಸಹ ಪ್ರಾಮಾಣಿಕ ದಕ್ಷತೆಯಿಂದ ಮಾಡಬೇಕಿದೆ. ಯಾವುದಲ್ಲೂ ನಿರ್ಲಕ್ಷ್ಯ ಸಲ್ಲದು ಈಗಾಗಲೇ ವಿವಿಧ ಗ್ರಾಮ ಪಂಚಾಯಿತಿ ನೀಡಿದ ವರದಿಯಂತೆ ಈ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಆದರೆ ಬಿಸಿಲಿನ ತಾಪಹೆಚ್ಚಾಗಿದ್ದು, ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಬಾವ ಉಂಟಾಗುವ ಸಂಭವವಿದೆ. ಮಳೆ ಬಾರದೆ ಇದ್ದಲ್ಲಿ ಸುಮಾರು ೬೦ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ೮ ಕಡೆ ಖಾಸಗಿಯವರಿಂದ ನೀರು ಪಡೆಯಲು ನಿರ್ಧರಿಸಿದೆ. ಹೆಚ್ಚುವರಿಯಾಗಿ ಆಭಾವ ಉಂಟಾದಲ್ಲಿ ಇನ್ನೂ ೩ ಕಡೆ ಖಾಸಗಿವರಿಂದಲೇ ನೀರು ಪಡೆಯಲು ಈಗಾಗಲೇ ತೀರ್ಮಾನಿಸಿದೆ. ಎಲ್ಲರೂ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದರು.ತಹಶೀಲ್ದಾರ್ ರೇಹಾನ್ ಪಾಷ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಲಕ್ಷ್ಮಣ್, ಎಇಇ ದಯಾನಂದ, ಬಿಸಿಎಂ ಅಧಿಕಾರಿ ನಾಗವೇಣಿ, ಎಸ್ಟಿ ಅಧಿಕಾರಿ ಶಿವರಾಜ್, ಬಿಇಒ ಕೆ.ಎಸ್.ಸುರೇಶ್, ಪಶು ಅಧಿಕಾರಿ ಡಾ.ರೇವಣ್ಣ ಮುಂತಾದವರು ಇದ್ದರು.