ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗರಸ್ತೆ ಅಗಲೀಕರಣ, ಕಟ್ಟಡಗಳ ತೆರವು ಮಾಡುವ ಕಾರ್ಯಾಚರಣೆ ಎಂಬ ಯುದ್ಧಕ್ಕೆ ಸನ್ನದ್ಧವಾಗಿರುವ ಚಿತ್ರದುರ್ಗ ನಗರಸಭೆಯಲ್ಲಿ ಸೇನಾಧಿಪತಿಯೇ ಇಲ್ಲ. ಕಾರ್ಯಪಡೆ ಕಟ್ಟಿಕೊಂಡು ಬೀದಿಗಿಳಿಯಬೇಕಾದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆ ಖಾಲಿ ಇದೆ. ಅಷ್ಟೇ ಏಕೆ ಮಂಜೂರಾದ ಹುದ್ದೆಗಳಲ್ಲಿ ಶೇ.ಅರ್ಧದಷ್ಟು ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಖಾಲಿ ಹುದ್ದೆಗಳಿಂದ ನಗರಸಭೆ ರಾರಾಜಿಸುತ್ತಿದೆ. ಅಗಲೀಕರಣಕ್ಕೆ ನಗರಸಭೆಗೆ ಅಗಾಧ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ.
ಪೌರಾಯುಕ್ತರು, ಎಂಜಿನಿಯರ್ ಸೇರಿದಂತೆ ಚಿತ್ರದುರ್ಗ ನಗರಸಭೆಗೆ 419 ಮಂಜೂರಾದ ಹುದ್ದೆಗಳಿವೆ. ಇದರಲ್ಲಿ 187 ಮಂದಿ ಮಾತ್ರ ಖಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದು 232 ಖಾಲಿ ಹುದ್ದೆಗಳಿವೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪರಿಸರ ಎಂಜಿನಿಯರ್, ಸೀನಿಯರ್ ಪ್ರೋಗ್ರಾಮರ್, ಎಲೆಕ್ರ್ಟೀಷಿಯನ್, ಲ್ಯಾಬ್ ಟೆಕ್ನೀಷಿಯನ್, ಪಂಬ್ಲರ್, ಶೀಘ್ರ ಲಿಪಿಕಾರರ ಹುದ್ದೆಗಳಿಗೆ ಯಾರೂ ಬಂದಿಲ್ಲ. ಎಂಟು ಮಂದಿ ಸಹಾಯಕ ನೀರು ಸರಬರಾಜುದಾರರ ಹುದ್ದೆ ಪೂರ್ಣ ಖಾಲಿ ಇವೆ.ಸಮುದಾಯ ಸಂಘಟಕರ ಮೂರು ಹುದ್ದೆಗಳಿಗೆ ಇಬ್ಬರು, ದ್ವಿತೀಯ ದರ್ಜೆ ಸಹಾಯಕ 14 ಹುದ್ದೆಗಳಿಗೆ 13, ಒಂಭತ್ತು ಮಂದಿ ಕರ ವಸೂಲಿಗಾರರ ಪೈಕಿ ಆರು ಜನ, 10 ವಾಹನ ಚಾಲಕ ಹುದ್ದೆಗಳಲ್ಲಿ ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. 225 ಪೌರ ಕಾರ್ಮಿಕರ ಹುದ್ದೆ ಮಂಜೂರಾಗಿದ್ದು 105 ಜನ ಕೆಲಸ ಮಾಡುತ್ತಿದ್ದಾರೆ. 120 ಹುದ್ದೆ ಖಾಲಿ ಇವೆ. 24 ಲೋಡರ್ ಹುದ್ದೆಗೆ ಕೇವಲ ಒಬ್ಬರು ಮಾತ್ರ ಇದ್ದಾರೆ. ಆರು ಮಂದಿ ಕ್ಲೀನರ್ ಇರಬೇಕಾದ ಜಾಗದಲ್ಲಿ ಒಬ್ಬರಿದ್ದಾರೆ. 50 ವಾಟರ್ ಸಪ್ಲೈ ವಾಲ್ ಮನ್ ಗಳಿಗೆ 13 ಮಂದಿ ಮಾತ್ರ ಇದ್ದು 37 ಹುದ್ದೆ ಖಾಲಿ ಇವೆ. ಇಂತಹ ಜಾಳು ಜಾಳಾದ ವ್ಯವಸ್ಥೆ ಇಟ್ಟುಕೊಂಡು ಪೌರಾಯುಕ್ತೆ ರೇಣುಕಾ ಅದ್ಹೇಗೆ ರಸ್ತೆ ತೆರವು ಕಾರ್ಯಾಚರಣೆ ಸಾಸಹ ಮಾಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕೌನ್ಸಿಲ್ ನಲ್ಲಿ ಚರ್ಚೆಯಾಗಿಲ್ಲ: ಚಿತ್ರದುರ್ಗ ನಗರದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದರೆ ಕೌನ್ಸಿಲ್ ನಲ್ಲಿ ಚರ್ಚೆಯಾಗಿ ನಿರ್ಣಯವಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ನಗರಸಭೆ ಅಧ್ಯಕ್ಷೆ ಹಾಗೂ ಪೌರಾಯುಕ್ತರ ಒಳಗೊಂಡ ಸಭೆಯಲ್ಲಿ ಎರಡೂ ಬದಿಯಲ್ಲಿ 21 ಮೀಟರ್ ರಸ್ತೆ ಅಗಲೀಕರಣದ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಇದಕ್ಕೆ ಕೌನ್ಸಿಲ್ ಒಪ್ಪಿಗೆ ಬೇಕು. ಸಾಮಾನ್ಯ ಸಭೆ ಕರೆದು ಚರ್ಚೆಗೆ ವಿಷಯ ತಂದು ನಿರ್ಣಯ ಕೈಗೊಳ್ಳಬೇಕು. ಹಾಗೊಂದು ವೇಳೆ ರಸ್ತೆ ಅಗಲೀಕರಣಕ್ಕೆ ಕೌನ್ಸಿಲ್ ಅಪಸ್ವರ ಎತ್ತಿದರೆ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.ಹಿಂದೊಮ್ಮೆ ಚಿತ್ರದುರ್ಗ ನಗರದಲ್ಲಿ ಕೈಗೆತ್ತಿಕೊಳ್ಳಲಾದ ಸಿಸಿ ರಸ್ತೆ ಹಾಗೂ ಡಿವೈಡರ್ ನಿರ್ಮಾಣದ ಕಾಮಗಾರಿಗಳಿಗೆ ನಗರಸಭೆ ಕೌನ್ಸಿಲ್ ಅಷ್ಟಾಗಿ ಒಪ್ಪಿಗೆ ಸೂಚಿಸಿದಂತೆ ಕಾಣಿಸುತ್ತಿಲ್ಲ. ಕಾಮಗಾರಿ ಪೂರ್ಣಗೊಂಡು ಬಳಕೆಗೆ ಮುಕ್ತವಾಗಿದ್ದರೂ ಇದುವರೆಗೂ ರಸ್ತೆ ಹಾಗೂ ಡಿವೈಡರ್‌ಗಳು ನಗರಸಭೆಗೆ ಹಸ್ತಾಂತರವಾಗಿಲ್ಲ. ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹಸ್ತಾಂತರ ಮಾಡಿಕೊಳ್ಳಬಾರದು. ಕಳಪೆ ಕಾಮಗಾರಿಗಳು ವಿಜೃಂಭಿಸಿವೆ ಎಂದು ಒಕ್ಕೊರಲಿನಿಂದ ಒತ್ತಾಯಿಸಿದ್ದರು. ಹಾಗಾಗಿ ರಸ್ತೆ ಅಗಲೀಕರಣದ ವಿಷಯದಲ್ಲಿ ನಗರಸಭೆ ಸದಸ್ಯರು ಕಾರ್ಯಾಚರಣೆ ಬಗ್ಗೆ ಸ್ಪಷ್ಟತೆ ಕೋರುವ ಸಾಧ್ಯತೆಗಳಿವೆ.
424 ಕಟ್ಟಡ ಗುರುತಿಸಿದ್ದೇವೆ: ಪೌರಾಯುಕ್ತೆ
ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್‌ಗೇಟ್‌ನಿಂದ ಕನಕ ವೃತ್ತದವರೆಗೆ ಎರಡೂ ಬದಿಯಲ್ಲಿ 21 ಮೀಟರ್ ರಸ್ತೆ ಅಗಲೀಕರಣ ಮಾಡಲು ಒಟ್ಟು 424 ಕಟ್ಟಡ ಗುರುತಿಸಿದ್ದೇವೆ. ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗೆ ಬಲ ಭಾಗದಲ್ಲಿ 32 ಸರ್ಕಾರಿ ಆಸ್ತಿ ಹಾಗೂ 6 ಖಾಸಗಿ ಆಸ್ತಿಗಳು ಬರುತ್ತವೆ. ಎಡ ಭಾಗದಲ್ಲಿ 11 ಸರ್ಕಾರಿ, 5 ಖಾಸಗಿ ಆಸ್ತಿಗಳಿವೆ. ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಎರಡೂ ಬದಿಯಲ್ಲಿ 145 ಖಾಸಗಿ ಆಸ್ತಿ ಹಾಗೂ ಒಂದು ಸರ್ಕಾರಿ ಕಟ್ಟಡ ಬರುತ್ತದೆ. ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಎರಡೂ ಬದಿಯಲ್ಲಿ 223 ಖಾಸಗಿ ಆಸ್ತಿಗಳು ಬರುತ್ತವೆ. ಇವುಗಳಲ್ಲಿ ದೇವಸ್ಥಾನ, ಮಸೀದಿ ಲೆಕ್ಕಹಾಕಿಲ್ಲ. 424 ಕಟ್ಟಡಗಳ ಗುರುತಿಸಿದ್ದೇವೆ ವಿನಹ ಅವುಗಳ ಡಾಕ್ಯುಮೆಂಟ್ ಪರಿಶೀಲಿಸಿಲ್ಲ ಎಂದು ನಗರಸಭೆ ಪೌರಾಯುಕ್ತೆ ರೇಣುಕ ಅವರು ತಿಳಿಸಿದ್ದಾರೆ.