ಟುಪಲೇವ್ ಯುದ್ಧ ವಿಮಾನದೊಳಗಿಲ್ಲ ಪ್ರವೇಶ, ಮಕ್ಕಳ ಕುತೂಹಲಕ್ಕೆ ತಣ್ಣೀರು

KannadaprabhaNewsNetwork |  
Published : Nov 24, 2024, 01:48 AM IST
ಟುಪಲೇವ್ ಯುದ್ಧ ವಿಮಾನ | Kannada Prabha

ಸಾರಾಂಶ

ವಿಮಾನ ವೀಕ್ಷಣೆಗೆ ಅವಕಾಶ ನೀಡಿ ಕೆಲವೇ ತಿಂಗಳು ಉರುಳಿದ್ದು, ವಿಮಾನ ಒಂದರಿಂದಲೇ ಜಿಲ್ಲಾಡಳಿತಕ್ಕೆ ಅಂದಾಜು ₹ ೪ ಲಕ್ಷ ಆದಾಯ ಬಂದಿದೆ. ಚಾಪೆಲ್ ಯುದ್ಧ ನೌಕೆಯಿಂದ ಬರುವ ಆದಾಯ ಪ್ರತ್ಯೇಕವಾಗಿದೆ.

ಕಾರವಾರ:

ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಇರುವ ಟುಪಲೇವ್ ಯುದ್ಧ ವಿಮಾನದೊಳಗೆ ಪ್ರವೇಶವಿಲ್ಲದೇ ಪ್ರವಾಸಿಗರು ನಿರಾಸೆಯಿಂದ ಮರಳುವಂತಾಗಿದೆ. ಶಾಲಾ ಪ್ರವಾಸದ ಅವಧಿಯಾಗಿದ್ದು, ಯುದ್ಧ ವಿಮಾನ ನೋಡುವ ಮಕ್ಕಳ ಕುತೂಹಲಕ್ಕೆ ತಣ್ಣೀರು ಎರಚಿದಂತಾಗಿದೆ.

ಕಳೆದ ತಿಂಗಳು ವಿಮಾನಕ್ಕೆ ಎಸಿ ಅಳವಡಿಸುವ ಉದ್ದೇಶದಿಂದ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಎಸಿ ಅಳವಡಿಕೆ ಮುಗಿದು ತಿಂಗಳು ಕಳೆದರೂ ಇದುವರೆಗೂ ಸಾರ್ವಜನಿಕರು ವಿಮಾನ ಒಳಗೆ ತೆರಳಿ ನೋಡಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳು ಶಾಲಾ ಮಕ್ಕಳಿಗೆ ಪ್ರವಾಸ ಏರ್ಪಡಿಸುವ ತಿಂಗಳಾಗಿದ್ದು, ಈಗಾಗಲೇ ಪ್ರತಿನಿತ್ಯ ನಾಲ್ಕೈದು ಬಸ್‌ನಲ್ಲಿ ಮಕ್ಕಳು ಆಗಮಿಸಲು ಆರಂಭಿಸಿದ್ದಾರೆ. ಕಾರವಾರದಲ್ಲಿ ಚಾಪೆಲ್ ಯುದ್ಧ ನೌಕೆ, ಟುಪಲೇವ್ ಯುದ್ಧ ವಿಮಾನ ವೀಕ್ಷಣೆಗೆ ಅವಕಾಶವಿದೆಯೆಂದು ತಿಳಿದು ಇಲ್ಲಿಗೆ ಆಗಮಿಸಿದರೆ ಕೇವಲ ಚಾಪೆಲ್ ನೋಡಿಕೊಂಡು, ಟುಪಲೇವ್ ನೋಡಲಾಗದೇ ನಿರಾಸೆಯಿಂದ ವಾಪಸ್ ತೆರಳುವಂತಾಗಿದೆ.

ಚಾಪೆಲ್ ಯುದ್ಧ ನೌಕೆ ಇಲ್ಲಿಗೆ ಆಗಮಿಸಿ ಹಲವು ವರ್ಷ ಕಳೆದಿದ್ದು, ಸಾಕಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಆದರೆ, ಟುಪಲೇವ್ ಯುದ್ಧ ವಿಮಾನ ಈಗಷ್ಟೆ ಇಲ್ಲಿಗೆ ತರಲಾಗಿದ್ದು, ವಿಮಾನದ ಕಾರ್ಯವೈಖರಿ ತಿಳಿದುಕೊಳ್ಳುವ, ವಿಮಾನದ ಒಳಗೆ ನೋಡುವ ಆಸಕ್ತಿ, ಕುತೂಹಲ ಜನರಲ್ಲಿ ಹೆಚ್ಚಿದ್ದು, ಇದರ ವೀಕ್ಷಣೆಗಾಗಿಯೇ ಸಾಕಷ್ಟು ಜನರು ಬರುತ್ತಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ ಯುದ್ಧ ವಿಮಾನವನ್ನು ಇಲ್ಲಿಗೆ ತಂದಿದ್ದರೂ ಜೋಡಣಾ ಕಾರ್ಯ ಪೂರ್ಣವಾಗದ ಕಾರಣ ವೀಕ್ಷಣೆಗೆ ಅವಕಾಶವಿರಲಿಲ್ಲ. ಕಳೆದ ಬಾರಿ ಆಗಮಿಸಿದ್ದ ಶಾಲಾ ಮಕ್ಕಳು ಈ ಬಾರಿಯೂ ವಿಮಾನ ನೋಡಲು ಬರುತ್ತಿದ್ದಾರೆ. ಈ ವರ್ಷವೂ ವೀಕ್ಷಣೆಗೆ ಅವಕಾಶವಿವೆಂದು ತಿಳಿದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಮಾನ ವೀಕ್ಷಣೆಗೆ ಅವಕಾಶ ನೀಡಿ ಕೆಲವೇ ತಿಂಗಳು ಉರುಳಿದ್ದು, ವಿಮಾನ ಒಂದರಿಂದಲೇ ಜಿಲ್ಲಾಡಳಿತಕ್ಕೆ ಅಂದಾಜು ₹ ೪ ಲಕ್ಷ ಆದಾಯ ಬಂದಿದೆ. ಚಾಪೆಲ್ ಯುದ್ಧ ನೌಕೆಯಿಂದ ಬರುವ ಆದಾಯ ಪ್ರತ್ಯೇಕವಾಗಿದೆ. ಶಾಲಾ ಮಕ್ಕಳು ಪ್ರವಾಸಕ್ಕೆ ಬರುವ ಈ ಅವಧಿಯಲ್ಲಿ ಯುದ್ಧ ವಿಮಾನ ಪ್ರವೇಶಮುಕ್ತವಾಗಿದ್ದರೆ ಮತ್ತಷ್ಟು ಆದಾಯವೂ ಬರುತ್ತಿತ್ತು. ಜಿಲ್ಲಾಡಳಿತ ಮುತುವರ್ಜಿ ವಹಿಸಿ ಆದಷ್ಟು ಶೀಘ್ರದಲ್ಲಿ ವಿಮಾನ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕಿದೆ.ಎಸಿ ಕೆಲಸಕ್ಕಾಗಿ ಹೈದರಾಬಾದ್‌ನಿಂದ ತಂತ್ರಜ್ಞರು ಬರಬೇಕಿದ್ದು, ಮುಂದಿನ ವಾರ ಆಗಮಿಸುವ ಸಾಧ್ಯತೆಯಿದೆ. ಎಸಿ ಇಲ್ಲದೇ ಇದ್ದರೆ ವಿಮಾನದ ಒಳಗೆ ಹೋಗಲು ತೊಂದರೆಯಾಗುತ್ತದೆ. ಎಸಿ ಕೆಲಸವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು