ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಶಂಕರ್ ಅಭಿಮತ
ಸಾಧನೆಯ ಹಂಬಲವಿರುವ ಯಾವುದೇ ವಿದ್ಯಾರ್ಥಿಗಳನ್ನು ಗಮನಿಸಿದರೆ ಅವರು ಗ್ರಂಥಾಲಯವನ್ನು ಪ್ರೀತಿಸುತ್ತಾರೆ. ಕಠಿಣ ಪರಿಶ್ರಮದೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಾರೆ. ಅದರೆ ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಖಂಡಿತವಾಗಿ ಭವಿಷ್ಯವಿಲ್ಲ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಂಕರ್ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್,ಎನ್‌ಸಿಸಿ, ಸ್ಕೌಟ್ಸ್, ಅಂಡ್ ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪದವಿ ಶಿಕ್ಷಣ ಎಂಬುದು ಕೇವಲ ಡಿಗ್ರಿ ಮಾತ್ರವಲ್ಲ ಬದಲಿಗೆ ಬದುಕು ಕಟ್ಟಿಕೊಳ್ಳಲು ಇಡುವ ಮಹತ್ವದ ಹೆಜ್ಜೆಯಾಗಿದೆ. ಒಂದು ದಿನವೂ ಗೈರುಹಾಜರಾಗದೆ ತರಗತಿಗಳಿಗೆ ಬರಬೇಕು. ಮನವಿಟ್ಟು ಉಪನ್ಯಾಸ ಕೇಳಬೇಕು. ಯಾರೋ ಕೊಡುವ ನೋಟ್ಸ್ ಮೇಲೆ ಅವಲಂಬಿತರಾಗಬೇಡಿ. ನೋಟ್ಸ್ ನಂಬಿ ಪರೀಕ್ಷೆ ಬರೆವವರು ಸಾಮಾನ್ಯ ವಿದ್ಯಾರ್ಥಿಗಳಾಗುತ್ತಾರೆ. ಪಠ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ನಿಮ್ಮ ನೋಟ್ಸ್ ನೀವೇ ಮಾಡಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.ವಿಶ್ವವಿದ್ಯಾಲಯ, ಪದವಿ ಕಾಲೇಜುಗಳ ಬೋಧಕರು ವಿದ್ಯಾರ್ಥಿಗಳಿಗೆ ಓದಿ ಎಂದು ಹೇಳುತ್ತಾರೆ ವಿನಃ ಹೇಗೆ ಓದಬೇಕು ಎಂದು ಹೇಳುವುದಿಲ್ಲ. ಹೇಳಿಕೊಡುವುದಿಲ್ಲ. ಯಾವುದೇ ವಿಷಯವಿರಲಿ ಸಂಪೂರ್ಣ ಮನನ ಆಗುವವರೆಗೆ ಓದಬೇಕು. ನಿರಂತರವಾಗಿ ಗ್ರಂಥಾಲಯದ ಸ್ನೇಹ ಬೆಳೆಸಬೇಕು. ಮೂಡುವ ಅನುಮಾನವನ್ನು ಅಲ್ಲಿಯೇ ಚಿವುಟಿ ಹಾಕಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದುತ್ತಾರೆ. ಅವರ ನೋಟ್ಸ್ ಅವರೇ ತಯಾರಿ ಮಾಡಿಕೊಳ್ಳುತ್ತಾರೆ. ಕಂಠಪಾಠದ ಮಾದರಿ ಕಾಲೇಜು ವಿದ್ಯಾರ್ಥಿಗಳಿಗೆ ಒಪ್ಪುವುದಿಲ್ಲ ಎಂದು ಹೇಳಿದರು.ಮಹಿಳಾ ಕಾಲೇಜಿನ ಹೆಣ್ಣು ಮಕ್ಕಳು ಓದನ್ನು ಬಿಟ್ಟು ಬೇರೆ ಸಲ್ಲದ ವಿಚಾರಗಳ ಕಡೆ ಗಮನ ನೀಡಬಾರದು. ನಿಮ್ಮ ಗುರಿ ಸ್ಪಷ್ಟವಾಗಿರಲಿ. ಬಿ.ಎ., ಬಿಕಾಂ,ಬಿಎಸ್ಸಿ, ಬಿಬಿಎ, ಬಿಸಿಎ ಯವುದೂ ಕನಿಷ್ಟವಲ್ಲ. ಎಲ್ಲಾ ಪದವಿಗಳಿಗೂ ಅದರದೇ ಆದ ತೂಕವಿದೆ. ನೀವು ಆರಿಸಿಕೊಂಡ ವಿಷಯಕ್ಕೆ ಗೌರವ ಪ್ರೀತಿ ತೋರಬೇಕು. ನಿಮ್ಮ ಐಚ್ಛಿಕ ವಿಷಯವೇ ನಿಮಗೆ ದೇವರಾಗಲಿದೆ. ೨೧ನೇ ಶತಮಾನದಲ್ಲಿಯೂ ಸಮಾಜ ವಿಜ್ಞಾನಕ್ಕೆ ಬೆಲೆಯಿದೆ. ಉತ್ತಮ ಓದು ಒಳ್ಳೆಯ ಉತ್ತಮ ಅಂಕಗಳಿಗೆ ದಾರಿಯಾಗಲಿದೆ ಎಂದರು.ಮೊಬೈಲ್ ಬಳಕೆ ಕಡಿಮೆ ಮಾಡಿ, ಅದು ನಿಮ್ಮ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತದೆ. ಮೊಬೈಲ್ ಮೋಹಕ್ಕೆ ಒಳಗಾದವರಿಗೆ ಭವಿಷ್ಯವಿಲ್ಲ. ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಇದ್ದಿದ್ದರೆ ಇಂದಿನ ಯುವಜನಾಂಗದಂತೆ ಹಾಳಾಗುತ್ತಿದ್ದೆವೇನೋ? ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳಿಗೆ ಏನೂ ಕೆಲಸವಿಲ್ಲ. ಶಿಕ್ಷಕರು ಅಪ್ಡೇಟ್ ಆಗದಿದ್ದರೆ ವಿದ್ಯಾರ್ಥಿಗಳಿಂದ ತಿರಸ್ಕೃತರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮೋಹನ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕಿ ಶಾರದಮ್ಮ, ಪ್ರಾಧ್ಯಾಪಕರಾದ ಡಾ.ವೆಂಕಟೇಶ್, ಡಾ.ರಾಮಕೃಷ್ಣಪ್ಪ, ಪದ್ಮಕುಮಾರಿ, ಹರೀಶ್, ಅಶ್ವತ್ಥ್ ನಾರಾಯಣ, ಡಾ.ನವೀನ್‌ಕುಮಾರ್, ಗ್ರಂಥಪಾಲಕ ಸಂತೋಷ್ ಕುಮಾರ್, ಮೇನೇಜರ್ ಸುಬ್ರಹ್ಮಣ್ಯ, ಅತಿಥಿ ಉಪನ್ಯಾಸಕ ಮುನಿರಾಜು ಎಂ. ಅರಿಕೆರೆ, ಸಿಬ್ಬಂದಿ ಇದ್ದರು.