ಧಾರವಾಡ: ಆಡಳಿತ ಸರ್ಕಾರಗಳು ಅನೇಕ ರೀತಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಜನರ ಜೀವನಮಟ್ಟ, ಅರ್ಥಿಕ ಸ್ಥಿತಿ ಸುಧಾರಣೆಗೆ ನಿರಂತರ ಪ್ರಯತ್ನಿಸುತ್ತಿವೆ. ಇದರ ಪ್ರಯೋಜನ, ಯೋಜನೆಗಳ ಸೌಲಭ್ಯ ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕಾದರೆ ಅವುಗಳ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ಕೇಂದ್ರ ಸಂಸ್ಕೃತಿ ಮಂತ್ರಾಲಯದ ತಜ್ಞರ ಸಮಿತಿ ಸದಸ್ಯ ಡಾ. ಶಶಿಧರ ನರೇಂದ್ರ ಹೇಳಿದರು.
ವಾರ್ತಾಭವನದಲ್ಲಿ ನಡೆದ ಬೀದಿ ನಾಟಕ ಮತ್ತು ಸಂಗೀತ ಕಲಾತಂಡಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಉತ್ಸಾಹ, ಸಮಾಜದ ಬಗ್ಗೆ ಕಳಕಳಿ ಮತ್ತು ಕಲೆಯ ಮೇಲಿನ ಪ್ರೀತಿಯನ್ನು ನೋಡಿ ನಮಗೆ ಹೆಮ್ಮೆಯಾಗಿದೆ. ಅರಿವು ಮೂಡಿಸುವ ಕಾರ್ಯಕ್ಕೆ ಕಲೆಗಿಂತ ಶ್ರೇಷ್ಠವಾದ ಮಾಧ್ಯಮ ಮತ್ತೊಂದಿಲ್ಲ. ನಮ್ಮ ಧಾರವಾಡದ ನೆಲ, ಇದು ಕಲೆ-ಸಾಹಿತ್ಯ-ಸಂಗೀತವನ್ನು ಉಸಿರಾಡುವ ಪುಣ್ಯಭೂಮಿ. ಇದು ಕೇವಲ ಒಂದು ಕಲಾತಂಡಗಳ ಆಯ್ಕೆ ಪ್ರಕ್ರಿಯೆಯಲ್ಲ. ಇದೊಂದು ದೊಡ್ಡ ಸಾಮಾಜಿಕ ಜವಾಬ್ದಾರಿಯ ಹೊಣೆಗಾರಿಕೆ. ಸರ್ಕಾರದ ಯೋಜನೆಗಳು ಜನರಿಗಾಗಿ, ಜನರ ಒಳಿತಿಗಾಗಿ ರೂಪುಗೊಳ್ಳುತ್ತವೆ. ಆದರೆ, ಎಷ್ಟೋ ಬಾರಿ ಈ ಯೋಜನೆಗಳ ಸಂಪೂರ್ಣ ಮಾಹಿತಿ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ತಲುಪುವುದಿಲ್ಲ ಎಂದರು.ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ಪ್ರತಿಯೊಂದು ತಂಡವೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿರಬೇಕು. ಕಲೆ ಕೇವಲ ಮನರಂಜನೆಯ ವಸ್ತುವಲ್ಲ. ಅದು ಸಮಾಜದ ಆತ್ಮಸಾಕ್ಷಿ. ಬೀದಿ ನಾಟಕ, ಜನಪದ ಸಂಗೀತ, ತತ್ವಪದಗಳು ಇವೆಲ್ಲವೂ ಜನರ ನಡುವಿನಿಂದಲೇ ಹುಟ್ಟಿಬಂದ ಕಲಾಪ್ರಕಾರಗಳು. ಇವುಗಳಿಗೆ ಯಾವುದೇ ವೇದಿಕೆ, ಟಿಕೆಟ್ ಅಥವಾ ಆಹ್ವಾನ ಪತ್ರಿಕೆಯ ಹಂಗಿಲ್ಲ. ಆದ್ದರಿಂದ ಜನರಿಗೆ ಬೀದಿ ನಾಟಕಗಳ ಮೂಲಕ ಸರ್ಕಾರದಿಂದ ಬಂದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ಕಲಾತಂಡದ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ, ಅವರ ಮನಸ್ಸಿನಂಗಳಕ್ಕೆ ತಲುಪಿಸಲು ಪ್ರಯತ್ನಿಸಬೇಕು. ನಾವು ಕೇವಲ ಸಂದೇಶವನ್ನು ಸಾರುವ ತಂಡಗಳನ್ನು ಹುಡುಕುತ್ತಿಲ್ಲ. ಆ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ, ಕಲಾತ್ಮಕವಾಗಿ ಪ್ರಸ್ತುತಪಡಿಸುವ ತಂಡಗಳು ಬೇಕು. ಅಭಿನಯ, ಸಂಗೀತ, ಸಂಭಾಷಣೆಗಳಲ್ಲಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಇರಬೇಕು. ನೋಡುಗರನ್ನು ಹಿಡಿದಿಡುವ ಶಕ್ತಿ ನಿಮ್ಮ ಪ್ರದರ್ಶನದಲ್ಲಿರಬೇಕು ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ. ಶುಭ, ಆರೋಗ್ಯ ಇಲಾಖೆಯ ಡಾ. ಸುಜಾತಾ ಹಸವೀಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಯಶ್ರೀ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ಹಿರಿಯ ಜಾನಪದ ಕಲಾವಿದರಾದ ಡಾ. ರಾಮು ಮೂಲಗಿ, ಶಂಭಯ್ಯ ಹಿರೇಮಠ, ಪ್ರಭು ಕುಂದರಗಿ, ಮಲ್ಲಪ್ಪ ಹೊಂಗಲ ಸೇರಿದಂತೆ ವಿವಿಧ ಕಲಾವಿದರು ಹಾಗೂ ಸಂಗೀತ ಕಲಾ ತಂಡಗಳಿದ್ದವು.