- ಅಡ್ಡಗೆದ್ದೆ ಪಂಚಾಯಿತಿ ಕಾವಡಿಯಲ್ಲಿ ನಡೆದ ಹಿದೂ ಸಮಾಜೋತ್ಸವದಲ್ಲಿ ಆಶೀರ್ವಚನ
ಹಿಂದೂ ಸಮಾಜ ಅನೇಕ ಸಮಸ್ಯೆಗಳಿಂದ ಕೂಡಿದೆ. ಅದಕ್ಕೆ ನಮ್ಮಲ್ಲಿನ ಉದಾಸೀನತೆ, ಪರಸ್ಪರ ಕಚ್ಚಾಟ, ಅಸೂಯೇ ಕಾರಣ. ಹಿಂದೂ ಸಮಾಜ ಉಳಿಸಿ ಬೆಳೆಸಬೇಕಾದರೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋಧರತ್ವ, ಮಾನವತ್ವ ಅನಿವಾರ್ಯ. ಮಾನವತ್ವಕ್ಕಿಂದ ದೊಡ್ಡ ಧರ್ಮ ಮೊತ್ತೊಂದಿಲ್ಲ ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅಡ್ಡಗದ್ದೆ ಪಂಚಾಯಿತಿ ಕಾವಡಿಯಲ್ಲಿ ಅಡ್ಡಗದ್ದೆ ಮಂಡಲ ಹಿಂದೂ ಸಮಾಜೋತ್ಸವದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿ ಸಮಾಜದ ಮೂಲ, ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಬೇಕು. ಉದಾಸೀನ ಪ್ರವೃತ್ತಿ ಬಿಡಬೇಕು. ಪರಸ್ಪರ ಕಚ್ಚಾಟ, ಅಸೂಯೆ ಬಿಟ್ಟು ಪ್ರೀತಿ, ವಿಶ್ವಾಸ, ಸಮನ್ವಯತೆ ಮೂಲಕ ಪರಿಹರಿಸಿಕೊಳ್ಳಬೇಕು. ಕುಟುಂಬ ವ್ಯವಸ್ಥೆ ಸರಿಯಿಲ್ಲದಿದ್ದರೆ ಹಿಂದೂ ಸಮಾಜವನ್ನು ಸರಿಪಡಿಸಲು ಸಾಧ್ಯವಿಲ್ಲ. ಕೌಟುಂಬಿಕ ಮೌಲ್ಯಗಳು ಅವನತಿಯತ್ತ ಸಾಗಿದೆ. ಮಾನವೀಯ ಸಂಬಂಧಪಟ್ಟು ಶಿಥಿಲಗೊಳ್ಳುತ್ತಿದೆ. ಹಿಂದೂ ಸಮಾಜ ಗಟ್ಟಿಗೊಳ್ಳಬೇಕಾದರೆ ಕುಟುಂಬ ಗಟ್ಟಿಯಾಗಬೇಕು. ಇದಕ್ಕಾಗಿ ನಿಯಮಗಳನ್ನು ಪಾಲಿಸಬೇಕು. ಕುಟುಂಬದಲ್ಲಿ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಪೋಷಕರ ಸುಪರ್ದಿಯಲ್ಲಿಯೇ ನೀಡಬೇಕು. ಮಕ್ಕಳಲ್ಲಿ ಒಳ್ಳೆಯ ಮೌಲ್ಯಯುತ, ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ನೀಡಬೇಕು.ಹಿಂದೂಗಳಲ್ಲಿ ಸ್ವಾಭಿಮಾನ ಕಡಿಮೆಯಾಗುತ್ತಿದೆ.ಅದಕ್ಕೆ ನಮ್ಮ ಧರ್ಮದ ಪರಿಸ್ಥಿತಿ ಈ ಮಟ್ಟಕ್ಕೆ ಬರಲು ಕಾರಣವಾಗಿದೆ. ನಮ್ಮ ಧರ್ಮದ ಹಿರಿಮೆ ಸರಿಯಾಗಿ ತಿಳಿದುಕೊಳ್ಳಬೇಕು. ಹಿಂದೂಗಳಲ್ಲಿ ಪರಸ್ಪರ ಸಹೋದರತ್ವ, ಪ್ರೀತಿ, ವಿಶ್ವಾಸ, ಸುಸಂಸ್ಕೃತಿ, ಸದೃಡವಾಗಬೇಕು. ಕುಟುಂಬದ ಪೋಷಣೆಯಾಗಬೇಕು. ಜಮೀನುಗಳನ್ನ ಉಳಿಸಿಕೊಳ್ಳಬೇಕು. ಮಾರಾಟ ಮಾಡಿ ನಗರಗಳಿಗೆ ಹೋಗುವ ಪದ್ಧತಿಗೆ ಕಡಿವಾಣ ಹಾಕಬೇಕಿದೆ.
ಪರಿವರ್ತನೆ ಜಗದ ನಿಯಮ. ಹಿಂದೂ ಧರ್ಮ,ಸಂಸ್ಕೃತಿ ಉಳಿಯಬೇಕಾದರೆ ನಮ್ಮಲ್ಲಿ ಪರಿವರ್ತನೆಯಾಗಬೇಕು. ಕೇವಲ ಸಮಾವೇಶ ,ಸಮ್ಮೇಳನಗಳಲ್ಲಿ ಮಾತನಾಡಿದರೆ, ಕೇಳಿದರೆ ಸಾಲದು.ಆಂತರಿಕವಾಗಿ ನಮ್ಮಲ್ಲಿ ನಮ್ಮ ಧರ್ಮ, ಸಂಸ್ಕೃತಿ ವಿಚಾರದಲ್ಲಿ ಅರಿವು, ಜ್ಞಾನ, ಪರಿವರ್ತನೆಯಾಬೇಕು. ಹೃದಯವಂತಿಕೆ ಪರಿವರ್ತನೆ ಯಾಗಬೇಕು. ಹೃದಯದಿಂದ ಸ್ಪಂದಿಸುವ ವಿಶಾಲತೆ ಬೇಕು. ಒಳ್ಳೆಯ ಚಿಂತನೆಗಳು, ಸಂಸ್ಕೃತಿ,ಸಂಸ್ಕಾರಗಳನ್ನು ಬೆಳೆಸಿಕೊಂಡು ಪರಿವರ್ತನೆಗೆ ನಾಂದಿ ಹಾಡಬೇಕು.ಶಾಶ್ವತವಾದ ಸಂಬಂಧಗಳನ್ನು ಸ್ಥಿರವಾಗಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕೃತಿ ಹಿಂದೂ ಸಮಾಜದ ಎರಡು ಕಣ್ಣುಗಳು. ಧರ್ಮ,ಸಂಸ್ಕೃತಿಯ ಪೋಷಣೆಯಾಗಲು ಪ್ರತೀ ಮನೆ ಮನೆಗೆ ಹೋಗಿ ಮರುಜೀವ ನೀಡುವ ಕೆಲಸ ಮಾಡಬೇಕು. ಕೇವಲ ಸಮಾಜೋತ್ಸವ, ಸಮ್ಮೇಳನ ಮಾಡಿದರೆ ಸಾಲದು. ಹಿಂದೂ ಸಮಾಜದ ಸಮಸ್ಯೆಗಳು ಬಗೆಹರಿಯಬೇಕು. ಜನರಲ್ಲಿ ಅಂತಹ ಕಳಕಳಿ ಬರಬೇಕು. ಒಗ್ಗಟ್ಟಾಗಬೇಕು. ಶ್ರಮಿಸಬೇಕು.ಆಸ್ತಿಗಾಗಿ ದಾಯದಿ ಕಲಹ ಮಾಡಿಕೊಂಡಿ ಕೋರ್ಟಿಗೆ ಹೋಗಬೇಡಿ. ಆಯಸ್ಸು ಮುಗಿದರೂ ಕೇಸು ಮುಗಿಯುವುದಿಲ್ಲ. ಒಡಹುಟ್ಟಿದವರಲ್ಲಿ ದಾಯದಿ ಕಲಹ ಬೇಡ. ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ. ಭಾರತೀಯ ಸಮಾಜ,ಸಂಸ್ಕೃತಿ ಧರ್ಮದ ಉಳಿವಿಗೆ ಪ್ರತಿಯೊಬ್ಬರೂ ಪಣತೊಡಬೇಕು ಎಂದರು.
ವಿಶ್ವಹಿಂದೂ ಪರಿಷತ್ ಮುಖಂಡ ಮಹಿಪಾಲ್ ದಿಕ್ಕೂಚಿ ಭಾಷಣ ಮಾಡಿ ಕ್ರೈಸ್ಥ ಧರ್ಮ, ಇಸ್ಲಾಂ ಧರ್ಮಗಳು ಕೇವಲ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾದರೆ ಹಿಂದೂ ಧರ್ಮ ಕೇವಲ ಒಬ್ಬ ವ್ಯಕ್ತಿಯಿಂದ ಆರಂಭವಾಗಿಲ್ಲ. ಸಾವಿರಾರು ಮಂದಿ ಋಷಿ, ಮುನಿಗಳು, ಸಂತರ,ಮಹಾತ್ಮರಿಂದ ಸಾವಿರಾರು ವರ್ಷಗಳ ಜಪ, ತಪ, ಕಠಿಣ ಪರಿಶ್ರಮಗಳಿಂದ ಅಸ್ತಿತ್ವಕ್ಕೆ ಬಂದಿದೆ.ಇಂತಹ ದಿಂದೂ ಧರ್ಮ,ಸಂಸ್ಕೃತಿ ಮೇಲೆ ಸಾವಿರಾರು ವರ್ಷಗಳಿಂದ ನಿರಂತರ ದಾಳಿ,ಆಕ್ರಮಣಗಳು ನಡೆಯುತ್ತಲೇ ಇದೆ.ಹಿಂದೂ ಸಮಾವೇಶ ಮಾಡುತ್ತಿರುವುದು ಹಿಂದೂ ರಾಷ್ಟ್ರ ಮಾಡು ಉದ್ದೇಶಕ್ಕಲ್ಲ. ಇದು ತಪ್ಪು ಭಾವನೆ. ಅಂದು,ಇಂದು ಮುಂದೆಯೂ ಎಂದೆಂದಿಗೂ ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ. ಅನ್ಯ ಧರ್ಮ,ಸಂಸ್ಕೃತಿಗಳ ದಾಳಿ, ಆಕ್ರಮಣಗಳಿಂದ ಹಿಂದೂ ಧರ್ಮದ ಸ್ಥಿತಿ ಶೋಚನೀಯ. ಹಿಂದೂ ಧರ್ಮ,ಸಂಸ್ಕೃತಿ ಉಳಿಸಿ, ಬೆಳೆಸುವ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡಲಾಗುತ್ತಿದೆ. ನಾವು ಎಚ್ಚೆತ್ತುಕೊಳ್ಳಬೇಕಿದೆ. ಜಾಗೃತರಾಗಿ ಧರ್ಮದ,ಸಂಸ್ಕೃತಿ ಉಳಿವಿಗಾಗಿ ಹೋರಾಡಬೇಕಿದೆ ಎಂದರು.
ಹಿಂದೂ ಸಮಾಜೋತ್ಸವ ಆಚರಣಾ ಸಮೀತಿ ಅಧ್ಯಕ್ಷ ಚೋಳರಮನೆ ಪ್ರದೀಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .ಕೆ.ಎಂ.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ಸುಮಂಗಲಿ ಆನಂದ ಸ್ವಾಮಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.27 ಶ್ರೀ ಚಿತ್ರ 1-
ಶೃಂಗೇರಿ ತಾಲೂಕಿನ ಕಾವಡಿಯಲ್ಲಿ ನಡೆದ ಅಡ್ಡಗದ್ದೆ ಮಂಡಲ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಹರಿಹರ ಪುರ ಶ್ರೀಗಳು ಆಶೀರ್ವಚನ ನೀಡಿದರು.