ಮಕ್ಕಳಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ

KannadaprabhaNewsNetwork | Published : Jan 13, 2025 12:49 AM

ಸಾರಾಂಶ

ಕೆಲವು ದಂಪತಿಗಳು ಮಕ್ಕಳಿಲ್ಲದೇ ಕೊರಗುತ್ತಿದ್ದಾರೆ. ಮಗು ಪಡೆದ ಪೋಷಕರು ಪುಣ್ಯವಂತರು. ದತ್ತು ಪಡೆದ ಪೋಷಕರು ಮಕ್ಕಳನ್ನು ಸಾಕುವ, ಶಿಕ್ಷಣ ಕೊಡಿಸುವ, ಉತ್ತಮ ನಾಗರಿಕರನ್ನಾಗಿ ಮಾಡುವ ಅರ್ಹತೆ ಇದೆಯೇ ಎಂಬುದಕ್ಕಾಗಿ ಈ ನಿಯಮಗಳಿವೆ

ಗದಗ: ಮಕ್ಕಳಿಗಿಂತ ದೊಡ್ಡ ಸಂಪತ್ತು ಇಲ್ಲ. ಮಕ್ಕಳ ಮೂಲಕ ಭಗವಂತನ ಸೇವೆ ಮಾಡುವ, ಭಗವಂತನನ್ನು ಕಾಣಲು ತನ್ನನ್ನ ಸಮರ್ಪಿಸಿಕೊಂಡಿರುವ ಸೇವಾ ಭಾರತಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಬೆಟಗೇರಿಯ ಹೆಲ್ತ್‌ ಕ್ಯಾಂಪ್‌ದಲ್ಲಿರುವ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಕೇರಳ (ವಕ್ಕಡಪುರಂ) ಹಾಗೂ ಚಿಕ್ಕಮಗಳೂರಿನ (ಮೇಗೂರ) ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನಿನ ಚೌಕಟ್ಟಿನಡಿ ದತ್ತು ಮಗು ಹಸ್ತಾಂತರಿಸಿ ಮಾತನಾಡಿದರು.

ಕೆಲವು ದಂಪತಿಗಳು ಮಕ್ಕಳಿಲ್ಲದೇ ಕೊರಗುತ್ತಿದ್ದಾರೆ. ಮಗು ಪಡೆದ ಪೋಷಕರು ಪುಣ್ಯವಂತರು. ದತ್ತು ಪಡೆದ ಪೋಷಕರು ಮಕ್ಕಳನ್ನು ಸಾಕುವ, ಶಿಕ್ಷಣ ಕೊಡಿಸುವ, ಉತ್ತಮ ನಾಗರಿಕರನ್ನಾಗಿ ಮಾಡುವ ಅರ್ಹತೆ ಇದೆಯೇ ಎಂಬುದಕ್ಕಾಗಿ ಈ ನಿಯಮಗಳಿವೆ. ದತ್ತು ನೀಡುವ ಮತ್ತು ಪಡೆದುಕೊಳ್ಳುವಲ್ಲಿ ಹಲವಾರು ನಿಯಮ, ಕಾನೂನಿನ ಚೌಕಟ್ಟುಗಳಿವೆ ಅವುಗಳನ್ನು ಪರಿಪಾಲಿಸುವದು ಅನಿವಾರ್ಯ ಎಂದರು.

ಮಗು ಎಲ್ಲಿ ಜನಿಸಿದೆ ಎಂಬುದು ಮುಖ್ಯ ಅಲ್ಲ. ದತ್ತು ಪಡೆದ ಪೋಷಕರ ಮಡಿಲಿಗೆ ಮಗು ಹಾಕಿದ ನಂತರ ಇಂದಿಗ ಮಗುವಿಗೆ ಪುನರ್ಜನ್ಮ ಸಿಕ್ಕಂತಾಯಿತು. ಮಕ್ಕಳನ್ನು ಬೆಳೆಸಿ, ದೇಶದ ಉತ್ತಮ ನಾಗರಿಕರನ್ನಾಗಿ ಮಾಡುವ ಹೊಣೆಗಾರಿಕೆ ದತ್ತು ಪಡೆದವರ ಜವಾಬ್ದಾರಿಯಾಗಿದೆ. ಸೇವಾ ಭಾರತಿ ಸಂಸ್ಥೆ ಮಾಡುತ್ತಿರುವ ಸೇವೆ ಅದ್ಭುತ ಸೇವೆ. ಭಗವಂತನ ಸೇವೆಗೆ ಮತ್ತೊಂದು ಸ್ವರೂಪವೇ ಈ ಸಂಸ್ಥೆಯ ಸೇವೆಯಾಗಿದೆ ಎಂದರು.

ವೈದ್ಯ ಡಾ.ಎಸ್.ಬಿ. ಶೆಟ್ಟರ ಮಾತನಾಡಿ, ಇದೊಂದು ಮನಕಲಕುವ, ಮನಕ್ಕೆ ಮುದು ನೀಡುವ ಕಾರ್ಯಕ್ರಮವಾಗಿದೆ. ಈ ಸಂಸ್ಥೆ ನಿಷ್ಕಾಮವಾಗಿ ಕೆಲಸ ಮಾಡುತ್ತಿದೆ. ಈ ಸೇವೆಯಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇರುವುದಿಲ್ಲ. ಸಮಾಜದ ಸಮಸ್ಯೆಗೆ ಉತ್ತರವು ಹೌದು, ಮಗು ಅನಾಥ ಆಗಬಾರದು ಅಂತಹ ಮಗುವಿಗೆ ಸೂರು ಕಲ್ಪಿಸುವುದು ಸಮಾಜದ ಜವಾಬ್ದಾರಿಯೂ ಹೌದು. ಇಂತಹ ಅಮೂಲ್ಯ ಸೇವೆಗೆ ಮುಂದಾಗಿರುವ ಸೇವಾ ಭಾರತಿ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.

ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಿ.ಬಿ. ಅಸೂಟಿ, ಆಶಾ ಶೆಟ್ಟರ್‌, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಬಸವರಾಜ ಸಂಶಿ, ಡಿ.ಐ. ಈರಗಾರ, ಸುಪರ್ಣಾ ಬ್ಯಾಹಟ್ಟಿ, ಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ನಾಗವೇಣಿ ಕಟ್ಟಿಮನಿ, ಗವಿಸಿದ್ಧಪ್ಪ ಕೊಣ್ಣೂರ, ಚನ್ನವೀರಪ್ಪ ಚನ್ನಪ್ಪನವರ, ಶಿವಕುಮಾರ ಸಣಕಲ್ಲ, ಲಲಿತಾಬಾಯಿ ಮೇರವಾಡೆ, ಅರುಣ ರಾಜಪುರೋಹಿತ, ಲುಕ್ಕಣಸಾಬ ರಾಜೋಳಿ, ಜಯರಾಜ ಮುಳಗುಂದ, ಪ್ರಮೋದ ಹಿರೇಮಠ, ಶ್ರೀಧರ ಕಾಂಬಳೆ, ಅಭಿಷೇಕ ಮಾಳೋದೆ, ಜ್ಯೋತಿ ಸಂಗಮದ ಮುಂತಾದವರಿದ್ದರು. ಉಮಾ ಚನ್ನಪ್ಪನವರ ಪ್ರಾರ್ಥಿಸಿದರು. ಪ್ರಾ.ಮಾರುತಿ ಕಟ್ಟಿಮನಿ ಸ್ವಾಗತಿಸಿದರು. ನರಸಿಂಹ ಕಾಮಾರ್ತಿ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು.

Share this article