- ಹೊನ್ನಾಳಿಯಲ್ಲಿ ಕಾರ್ತಿಕೋತ್ಸವ, ಧರ್ಮಸಭೆಯಲ್ಲಿ ಹಿರೇಕಲ್ಮಠದ ಶ್ರೀ ಆಶೀರ್ವಚನ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಂಸ್ಕಾರವಂತನಾಗಿರಬೇಕು, ಗುರು ಹಿರಿಯರಿಗೆ ಗೌರವ ಕೊಡಬೇಕು, ತಂದೆ- ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಇಂತಹ ಸಂಸ್ಕಾರ ಇಲ್ಲದಿದ್ದರೆ ಆತನ ಜೀವನ ಸುಖಕರವಾಗಿ, ಆರೋಗ್ಯಕರವಾಗಿ ಇರುವುದಿಲ್ಲ ಎಂದು ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಗುರುವಾರ ರಾತ್ರಿ ಪಟ್ಟಣದ ಹಿರೇಕಲ್ಮಠದಲ್ಲಿ ಕಾರ್ತಿಕೋತ್ಸವ, ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಹಾಗೂ ಗುರು ಚನ್ನೇಶ್ವರರ ಬೆಳ್ಳಿ ರಥೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಏಕಬೋಟೆ ಮಾತನಾಡಿ, ಒಬ್ಬ ವ್ಯಕ್ತಿ ಎಷ್ಟೇ ಡಿಗ್ರಿಗಳನ್ನು ಪಡೆದುಕೊಂಡರೂ ಅವರಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲದಿದ್ದರೆ ಅದೆಲ್ಲವೂ ವ್ಯರ್ಥ. ಆಧುನಿಕ ಜೀವನದ ಭರಾಟೆಯಲ್ಲಿ ಸಂಸ್ಕಾರಕ್ಕೆ ಚ್ಯುತಿ ತರುತ್ತಿದ್ದಾರೆ. ಇಂತಹ ಮಠಗಳ ಆಶ್ರಯದಲ್ಲಿ ನಡೆಯುವ ಧರ್ಮಸಭೆಗಳಲ್ಲಿ ಉಪನ್ಯಾಸ ಕೇಳುವ ಮೂಲಕ ಎಲ್ಲರೂ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದರು.
ಕತ್ತಿಗೆ ಗ್ರಾಮದ ರೇವಣಸಿದ್ದೇಶ್ವರ ಸ್ಟೋನ್ ಕ್ರಷರ್ ಮಾಲೀಕ ಧನಂಜಯ ಪಾಟೀಲ್ ಪೂಜಾ ಮತ್ತು ಭಕ್ತರಿಗೆ ಪ್ರಸಾದ ಸೇವೆ ನಡೆಸಿಕೊಟ್ಟರು. ಜಕ್ಕಿನಕೊಪ್ಪ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕೋಲಾಟ ಸಂಘದವರು ಭಜನೆ ಹಾಗೂ ಕೋಲಾಟ ಪ್ರದರ್ಶನ ಮಾಡಿದರು. ಕೆಪಿಟಿಸಿಎಲ್ ಉದ್ಯೋಗಿ ಕೀರ್ತನ ವಿಶೇಷ ನೃತ್ಯರೂಪಕ ನಡೆಸಿಕೊಟ್ಟರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬದರೀನಾಥ್, ಖಜಾಂಚಿ ವೀರೇಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಎನ್.ಕೆ. ಆಂಜನೇಯ, ಮುದ್ದಯ್ಯ, ರಾಜ್ಯ ಸಮಿತಿ ಸದಸ್ಯರಾದ ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಸ್.ಕೆ. ಒಡೆಯರ್, ನಿರ್ದೇಶಕರಾದ ವಿಶ್ವನಾಥ್, ವೇದಮೂರ್ತಿ, ಮಂಜುನಾಥ್ ಕಾಡಜ್ಜಿ, ಭಾರತಿ, ರಘುಪ್ರಸಾದ್, ರಾಘವೇಂದ್ರ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಕೋರಿ ಯೋಗೀಶ್, ಮೃತ್ಯುಂಜಯ ಪಾಟೀಲ್, ಗಿರೀಶ್ ನಾಡಿಗ್, ಹಾಲೇಶ್, ರುದ್ರೇಶ್, ಮುಖಂಡರಾದ ಎಚ್.ಎ. ಉಮಾಪತಿ, ಶಿಕ್ಷಕರಾದ ಕರಿಬಸಯ್ಯ ಇತರರು ಉಪಸ್ಥಿತರಿದ್ದರು.
-21ಎಚ್.ಎಲ್.ಐ2: