ಜಗತ್ತಿನಲ್ಲಿ ವ್ಯಾಪಾರ, ವಿನಿಮಯಗಳು ಇಲ್ಲದೇ ಬದುಕೇ ಇಲ್ಲ: ಡಾ.ಸುಪ್ರಿಯ

KannadaprabhaNewsNetwork | Published : Dec 4, 2024 12:33 AM

ಸಾರಾಂಶ

ವಿಶ್ವದಲ್ಲಿ ವ್ಯಾಪಾರ ಹಾಗೂ ವಿನಿಮಯಗಳಿಲ್ಲದೇ ಯಾವ ಬದುಕು ಸಾಧ್ಯವಿಲ್ಲ. ಇದನ್ನೇ ವಾಣಿಜ್ಯ ಎನ್ನಲಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಆರ್‌. ಸುಪ್ರಿಯ ಅಭಿಪ್ರಾಯಪಟ್ಟಿದ್ದಾರೆ.

- ರಾಜ್ಯಮಟ್ಟದ 6ನೇ ವಾಣಿಜ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವದಲ್ಲಿ ವ್ಯಾಪಾರ ಹಾಗೂ ವಿನಿಮಯಗಳಿಲ್ಲದೇ ಯಾವ ಬದುಕು ಸಾಧ್ಯವಿಲ್ಲ. ಇದನ್ನೇ ವಾಣಿಜ್ಯ ಎನ್ನಲಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಆರ್‌. ಸುಪ್ರಿಯ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ವಾಣಿಜ್ಯ ವಿಭಾಗದ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ವತಿಯಿಂದ ಸೋಮವಾರ ಏರ್ಪಾಡಾಗಿದ್ದ ರಾಜ್ಯಮಟ್ಟದ ವಾಣಿಜ್ಯ ಪ್ರದರ್ಶನ 6ನೇ ವಾಣಿಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ರಂಗವು ವಿಶ್ವದ ಎಲ್ಲ ರಂಗಗಳಿಗೂ ಸಂಪರ್ಕ ಸೇತುವೆಯಂತಿದೆ. ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಹಾಗೂ ನೌಕರಿಯನ್ನು ಸಹ ಒದಗಿಸುತ್ತಿದೆ. ವಿದ್ಯಾರ್ಥಿಗಳು ಭವಿಷ್ಯದ ಮಹತ್ತರ ವಾಣಿಜ್ಯೋದ್ಯಮಿಗಳಾಗಬೇಕು ಎಂದರು.

ಎಂಎಸ್‌ಬಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಪ್ರೊ. ಜಿ.ಸಿ. ನೀಲಾಂಬಿಕಾ ಮಾತನಾಡಿ, ವಾಣಿಜ್ಯ ರಂಗವು ಕಾರ್ಪೊರೇಟ್ ಜಗತ್ತಿನ ಹೆಬ್ಬಾಗಿಲಿನಂತೆ. ಪ್ರಸ್ತುತ ವಿದ್ಯಾರ್ಥಿಗಳು ವಾಣಿಜ್ಯ ವಿಷಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಕೇವಲ ಪದವಿ ಪಡೆದರೆ ಸಾಲದು, ಸ್ಪಷ್ಟವಾದ ಕಲ್ಪನೆ ಹಾಗೂ ಯೋಜನೆಗಳು ಭವಿಷ್ಯದ ನಿರ್ಧಾರಗಳ ಬಗ್ಗೆ ಇರಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಬಿ.ವೀರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಣಿಜ್ಯ ಪದವಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಗೆ ವಾಣಿಜ್ಯೋದ್ಯಮ ಅತ್ಯವಶ್ಯ, ವಾಣಿಜ್ಯೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 450ಕ್ಕೂ ಹೆಚ್ಚು ನೋಂದಣಿಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ, ಲಕ್ಷ್ಮೀ ರಜಪುತ್, ಮೊಹಮ್ಮದ್ ಆದಿಲ್, ಪ್ರೊ. ಎಂ.ಎಸ್. ನಾಗರಾಜ, ವಿ.ಸಿಂಚನ, ಕೆ.ಎನ್.ರಕ್ಷಾ ಇತರರು ಇದ್ದರು. ಎನ್.ಸಿ.ಪ್ರಜ್ಞಾ, ಸಿ.ಕೆ.ಸ್ಫೂರ್ತಿ ಪ್ರಾರ್ಥಿಸಿದರು.

- - - -2ಕೆಡಿವಿಜಿ34.ಜೆಪಿಜಿ:

ದಾವಣಗೆರೆ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಷನ್‌ನಲ್ಲಿ ನಡೆದ ವಾಣಿಜ್ಯ ಪ್ರದರ್ಶನವನ್ನು ಡಾ. ಆರ್.ಸುಪ್ರಿಯಾ ಉದ್ಘಾಟಿಸಿದರು.

Share this article