ಬಾಹ್ಯಾಕಾಶ ಅಧ್ಯಯನಗಳಿಗೆ ಹಾಗೂ ಉಪಗ್ರಹ ಉಡಾವಣೆಗಳಿಗೆ ಖರ್ಚು ಮಾಡುವುದು ವ್ಯರ್ಥ ಎಂಬ ಭಾವನೆ ಈಗಲೂ ಹಲವರಲ್ಲಿದೆ. ಆದರೆ ಇದರಿಂದ ಹೆಚ್ಚು ಅನುಕೂಲ ಹಾಗೂ ಲಾಭವಿದೆ ಎಂದು ಗಣಿತ ಸಂವಹನಕಾರ ಹಾಗೂ ಬಾಹ್ಯಾಕಾಶ ವಿಜ್ಞಾನ ಮಾರ್ಗದರ್ಶಿ ಟಿ.ಎಸ್.ಕೃಷ್ಣಚೈತನ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಬಾಹ್ಯಾಕಾಶ ಅಧ್ಯಯನಗಳಿಗೆ ಹಾಗೂ ಉಪಗ್ರಹ ಉಡಾವಣೆಗಳಿಗೆ ಖರ್ಚು ಮಾಡುವುದು ವ್ಯರ್ಥ ಎಂಬ ಭಾವನೆ ಈಗಲೂ ಹಲವರಲ್ಲಿದೆ. ಆದರೆ ಇದರಿಂದ ಹೆಚ್ಚು ಅನುಕೂಲ ಹಾಗೂ ಲಾಭವಿದೆ ಎಂದು ಗಣಿತ ಸಂವಹನಕಾರ ಹಾಗೂ ಬಾಹ್ಯಾಕಾಶ ವಿಜ್ಞಾನ ಮಾರ್ಗದರ್ಶಿ ಟಿ.ಎಸ್.ಕೃಷ್ಣಚೈತನ್ಯ ಹೇಳಿದರು. ಪಟ್ಟಣದಲ್ಲಿ ಚಿದಂಬರೇಶ್ವರ ಗ್ರಂಥಾಲಯ, ರೋಟರಿಕ್ಲಬ್ ಹಾಗೂ ಗೌರಿಬಿದನೂರಿನ ಕ್ರಿಯಾಕ್ಟೀವ್ ಸಂಸ್ಥೆಗಳ ವತಿಯಿಂದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬಾಹ್ಯಾಕಾಶ ಅಧ್ಯಯನ ಮತ್ತು ಉಪಗ್ರಹ ಉಡಾವಣೆಗೆ ಖರ್ಚು ಮಾಡುವುದರಿಂದ ಹಲವಾರು ಸೇವೆ, ಸಂಹವನ, ಮಾಹಿತಿ ತಂತ್ರಜ್ಞಾನ ಹಾಗೂ ಹವಾಮಾನ ಬದಲಾವಣೆಗಳ ಮಾಹಿತಿ ಹಂಚಿಕೆ ಮಾಡುತ್ತವೆ. ಈ ಉಪಗ್ರಹಗಳು ನೀಡುತ್ತಿರುವ ಕೊಡುಗೆ ಬೆಲೆ ಕಟ್ಟಲಾಗದ್ದು. ದೇಶದ ಭದ್ರತೆ ಮತ್ತು ಸುರಕ್ಷತೆಯ ವಿಷಯದಲ್ಲಂತೂ ಉಪಗ್ರಹಗಳ ಸಹಾಯ ಬೇಕೇ ಬೇಕು. ಹಾಗಾಗಿ ಬಾಹ್ಯಾಕಾಶ ಅಭಿವೃದ್ಧಿಯ ಅನಂತ ಅವಕಾಶಗಳ ತಾಣವಾಗಿದೆ. ಇದರಲ್ಲಿ ಭಾರತವೂ ಅಗ್ರಪಂಕ್ತಿಯಲ್ಲಿದೆ ಎಂಬುದು ಹೆಮ್ಮೆಯ ಸಂಗತಿ. ಒಂದೇ ಬಾರಿಗೆ ೧೦೪ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಕೀರ್ತಿ ಭಾರತದ್ದಾಗಿದೆ. ಈ ಸಾಧನೆಯನ್ನು ಈವರೆಗೆ ಯಾವೊಂದು ದೇಶವೂ ಮಾಡಿಲ್ಲ ಎಂದು ಹೇಳಿದರು. ಚಂದ್ರಯಾನ-೩ ಯಶಸ್ಸಿನ ನೆನಪಲ್ಲಿ ಆಚರಿಸುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಭಾರತದ ಆತ್ಮನಿರ್ಭರತೆ, ಕತೃತ್ವ ಶಕ್ತಿ ಹಾಗೂ ಆಳ ಸಂಶೋಧನೆಯ ಬದ್ಧತೆ ಮತ್ತು ಪ್ರಬುದ್ಧತೆಯನ್ನು ಜಗತ್ತಿಗೆ ತೋರಿಸುವುದೇ ಆಗಿದೆ ಎಂದು ಟಿ.ಎಸ್.ಕೃಷ್ಣಚೈತನ್ಯ ಹೇಳಿದರು. ರೋಟರಿಕ್ಲಬ್ ಅಧ್ಯಕ್ಷ ವಿ.ಆರ್. ಉಮೇಶ್ ಮಾತನಾಡಿ ಈ ಬಾರಿ ಸಾಂಪ್ರದಾಯಿಕ ಖಗೋಳ ಶಾಸ್ತ್ರವನ್ನು ಗೌರವಿಸುತ್ತಲೇ ಆಧುನಿಕ ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ ಎಂಬ ಕಲ್ಪನೆಯಡಿಯಲ್ಲಿ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಇದು ಭೂತಕಾಲ ಮತ್ತು ಭವಿಷ್ಯತ್ತಿನ ಸೇತುವೆ ಆಗಲಿದೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಬಾಹ್ಯಾಕಾಶ ಕುರಿತು ಜ್ಞಾನವನ್ನು ಪಡೆಯಬೇಕಿದೆ. ಶಾಲಾ ಕಾಲೇಜುಗಳಲ್ಲಿ ಬಾಹ್ಯಾಕಾಶ ಸಪ್ತಾಹ ಆಚರಿಸಬೇಕು. ಇದಕ್ಕೆ ರೋಟರಿ ಕ್ಲಬ್ ಅಗತ್ಯ ನೆರವು ನೀಡಲಿದೆ ಎಂದರು. ರೋಟರಿಕ್ಲಬ್ ಮಾಜಿ ಅಧ್ಯಕ್ಷ ಎಸ್.ಎಲ್.ಎನ್. ರಾಜಣ್ಣ ಮತ್ತು ಲೇಖಕ ತುರುವೇಕೆರೆ ಪ್ರಸಾದ್, ರೋಟರಿ ಕಾರ್ಯದರ್ಶಿ ಸಿ.ಆರ್.ಸುನಿಲ್. ಕೆ.ಎಚ್.ಆನಂದರಾಜ್, ಆರ್. ಸತ್ಯನಾರಾಯಣ್, ಟಿ.ಎಸ್. ವಿಠ್ಠಲ ದೀಕ್ಷಿತ್, ಬಿ.ಎನ್. ಪ್ರಾಣೇಶ್, ಅರಳೀಕೆರೆ ಲೋಕೇಶ್ ಇತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಗ್ರಂಥಾಲಯ ಸಂಸ್ಥಾಪಕ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.