ಕೊಪ್ಪಳ: ಕೊಪ್ಪಳ ನಗರಸಭೆಯಲ್ಲಿ ನಯಾ ಪೈಸೆ ಇಲ್ಲ, ಇದ್ದ ₹28.96 ಕೋಟಿಯನ್ನು ಸಂಪೂರ್ಣ ಖರ್ಚು ಮಾಡಲಾಗಿದೆ. ಆದರೆ ಮಾಡಿದ ಖರ್ಚಿಗೆ ಲೆಕ್ಕವೂ ಇಲ್ಲ, ಅದರ ದಾಖಲೆಯೂ ಇಲ್ಲ!
ಇದು, ವಿರೋಧ ಪಕ್ಷದವರು ಮಾಡುವ ಆರೋಪವೂ ಅಲ್ಲ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಯೂ ಅಲ್ಲ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ಚರ್ಚೆಯಾಗಿರುವ ಮಾಹಿತಿ. ಖುದ್ದು ಇದನ್ನು ಪೌರಾಯುಕ್ತ ವೆಂಕನಗೌಡ ನಾಗನೂರು ಅವರು ಸಹ ಒಪ್ಪಿಕೊಂಡಿದ್ದಾರೆ.
ಖಜಾನೆಯಲ್ಲಿ ಹಣ ಇಲ್ಲ ಎನ್ನುವುದು ಆಘಾತಕಾರಿ ಎನಿಸಿದರೆ ಖರ್ಚು ಮಾಡಿದ ಹಣಕ್ಕೆ ಲೆಕ್ಕಾಚಾರವೇ ಇಲ್ಲ ಎನ್ನುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ಕಳೆದೊಂದು ತಿಂಗಳಿಂದ ಬಂದಿರುವ ನೂತನ ಪೌರಾಯುಕ್ತ ವೆಂಕನಗೌಡ ನಾಗನೂರು ಅವರು ಇಟ್ಟಿರುವ ಲೆಕ್ಕಾಚಾರ ಮಾತ್ರ ಲಭ್ಯ. ಉಳಿದಂತೆ ಹಿಂದೆ ಆದ ಖರ್ಚಿಗೆ ಲೆಕ್ಕವೂ ಇಲ್ಲ, ಅವುಗಳ ದಾಖಲೆಯೂ ಇಲ್ಲ. ಅದನ್ನು ಕೊಡಲು ಹಿಂದಿನ ಪೌರಾಯುಕ್ತರೇ ಬರಬೇಕಂತೆ.ನಗರಸಭೆಯಲ್ಲಿ 2024 ನವೆಂಬರ್ ತಿಂಗಳಿಂದ ಸೆಪ್ಟೆಂಬರ್ 2025ರ ವರೆಗೂ ಆರಂಭಿಕ ಶಿಲ್ಕು ₹13.14 ಕೋಟಿ ಸೇರಿ ₹28.96 ಕೋಟಿ ಜಮೆಯಾಗಿದೆ. ಇದರಲ್ಲಿ ಇದುವರೆಗೂ 28.95 ಕೋಟಿ ವೆಚ್ಚ ಮಾಡಲಾಗಿದೆ. ವೆಚ್ಚ ಮಾಡಿದ್ದಕ್ಕೆ ಬ್ಯಾಂಕ್ ಖಾತೆಯ ವಿವರ ಇದೆಯೇ ಹೊರತು ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎನ್ನುವ ದಾಖಲೆಯ ವಿವರವೇ ಇಲ್ಲ.
ತಮ್ಮ ಅವಧಿಯಲ್ಲಿ ಇಷ್ಟೊಂದು ಹಣ ಖರ್ಚಾಗಿದೆಯೇ ಎಂದು ಸ್ವತಃ ಅಧ್ಯಕ್ಷ ಅಮ್ಜದ್ ಪಟೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಾನು ಪ್ರತಿ ತಿಂಗಳು ಲೆಕ್ಕ ಕೊಡಿ ಎಂದು ಎಂದು ಹತ್ತಾರು ಬಾರಿ ಕೇಳಿದರೂ ಇದುವರೆಗೂ ನೀಡಿಲ್ಲ. ಅಷ್ಟೇ ಅಲ್ಲ, ನನ್ನಿಂದ ಯಾವುದೇ ಅನುಮತಿಯನ್ನೂ ಪಡೆದಿಲ್ಲ. ಅಧಿಕಾರಿಗಳೇ ಎಲ್ಲವನ್ನು ಮಾಡಿದ್ದಾರೆ. ತಾವೇ ಜಮೆ ಮಾಡಿಕೊಂಡಿದ್ದಾರೆ. ತಾವೇ ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ. ಮಾಡಿರುವ ಖರ್ಚಿಗೆ ಯಾರ ಅನುಮತಿ ಪಡೆದಿದ್ದೀರಿ ಎಂದು ಖುದ್ದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲ, ತಾವು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ನನ್ನ ಸಹಿ ಮಾಡುವ ಜಾಗಕ್ಕೆ ವೈಟ್ನರ್ ಹಚ್ಚಿ, ಸಹಿಯನ್ನೇ ದುರ್ಬಳಕೆ ಮಾಡಿಕೊಂಡಿದ್ದರು. ನಾನಿನ್ನು ಆ ದಾಖಲೆ ಇಟ್ಟುಕೊಂಡಿದ್ದೇನೆ ಎಂದರು.
ಸದಸ್ಯ ರಾಜಶೇಖರ ಆಡೂರು ಅವರು ಪ್ರಶ್ನೆ ಮಾಡಿ, ₹28 ಕೋಟಿ ವೆಚ್ಚ ಮಾಡಿದ್ದೀರಿ, ಆದರೆ, ಗುತ್ತಿಗೆ ಆಧಾರದ ಕಾರ್ಮಿಕರಿಗೆ, ಡ್ರೈವರ್‌ಗೆ ಯಾಕೆ ವೇತನ ಪಾವತಿ ಮಾಡಿಲ್ಲ ಎಂದು ಬಿಗಿಪಟ್ಟು ಹಿಡಿದರು. ಇದಕ್ಕೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್ ಬೆಂಬಲ ಸೂಚಿಸಿದರು. ಕೊನೆಗೆ ಬಾಕಿ ಇರುವ ವೇತನ ಪಾವತಿ ಮಾಡಿ, ಅವರನ್ನು ಮುಂದುವರಿಸಲು ತೀರ್ಮಾನಿಸಲಾಯಿತು.
ಪುಟ್‌ಪಾತ್ ತೆರವಿಗೆ ಆಗ್ರಹ: ಸದಸ್ಯ ಮುಚ್ಚು ಕುಷ್ಟಗಿ ಮಾತನಾಡಿ, ನಗರದಲ್ಲಿ ಫುಟ್‌ಪಾತ್ ಒತ್ತುವರಿ ವಿಪರೀತವಾಗಿದೆ. ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಕೂಡಲೇ ತೆರವು ಮಾಡುವಂತೆ ಆಗ್ರಹಿಸಿದರು. ಅಧ್ಯಕ್ಷ ಅಮ್ಜದ್ ಪಟೇಲ್ ಅವರು ಮಧ್ಯೆ ಪ್ರವೇಶ ಮಾಡಿ, ಕೂಡಲೇ ಕ್ರಮವಹಿಸಿ ಎಂದು ಸೂಚಿಸಿದರು.