ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
₹184 ಕೋಟಿ ಹಗರಣದ ಪ್ರಕರಣ ಸಿಎಂ ಮತ್ತು ಡಿಸಿಎಂ ಬುಡಕ್ಕೂ ಬರಲಿದ್ದು, ಎಸ್ಸಿ, ಎಸ್ಟಿ ವರ್ಗದವರನ್ನು ಬೀದಿಯಲ್ಲಿ ಬಿದ್ದು ನರಳುವಂತೆ ಮಾಡಲಾಗಿದೆ. ವಾಲ್ಮೀಕಿ ನಿಗಮ ಮತ್ತು ಮೂಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕ್ಷಣ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಹೊಂದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.ಪಟ್ಟಣದ ವಿಧ್ಯಾಧಿರಾಜ ಸಭಾ ಭವನದಲ್ಲಿ ನಡೆದ ಮಂಡಲ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ನಡೆಸಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದ ಪರಿಣಾಮ ಅಭಿವೃದ್ಧಿನಿಂತ ನೀರಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟಿಸಬೇಕಿದೆಂದು ಹೇಳಿದರು.
ಇಡಿ ನೀಡಿರುವ ವರದಿಯಂತೆ ವಾಲ್ಮೀಕಿ ನಿಗಮದಲ್ಲಿ ಲೂಟಿ ಮಾಡಿದ ಹಣವನ್ನು ಬಳ್ಳಾರಿ ಚುನಾವಣೆಯಲ್ಲಿ ಹೆಂಡ ಹಂಚಲು ಬಳಸಲಾಗಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತನಿಖೆಯಲ್ಲಿ ಸಂಬಂಧಿಸಿದ ಸಚಿವ ಹಾಗೂ ನಿಗಮದ ಅಧ್ಯಕ್ಷರ ಹೆಸರನ್ನೇ ಕೈ ಬಿಟ್ಟಿದೆ. ಈ ನಿಗಮದ ಚಂದ್ರಶೇಖರ ಆತ್ಮಹತ್ಯೆ ಮಾಡಿ ಕೊಳ್ಳದಿದ್ದರೆ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಸದನದಲ್ಲಿ ಮಾಡಿದ ಭಾಷಣ ಪ್ರಚಾರ ಮಾಡುವಂತೆ ಒತ್ತಡ ಹೇರಿದ ದೈನೇಸಿ ಸಿಎಂ ಎಂದೂ ಲೇವಡಿ ಮಾಡಿದರು.ಪ್ರಧಾನಿ ಮೋದಿ ಆಡಳಿತದಲ್ಲಿ 13 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಮೂಲಕ ಹತ್ತು ವರ್ಷಗಳ ಆಡಳಿತದಲ್ಲಿ ಪವಾಡ ಸಾಧಿಸಲಾಗಿದೆ. ಅಮೆರಿಕಾ ಸೇರಿ ಜಗತ್ತಿನ ಪ್ರಬಲ ರಾಷ್ಟ್ರಗಳಿಗೂ ಶೆಡ್ಡು ಹೊಡೆದ ಪ್ರಧಾನಿ ಮೋದಿ, ನಮ್ಮದು ಜನಸಂಖ್ಯೆಯೇ ಪ್ರಬಲ ಅಸ್ತ್ರ ಎಂದು ತೋರಿದ ಹೆಮ್ಮೆಯ ಮೊದಲ ಪ್ರಧಾನಿ. ಈ ಬಾರಿ ₹೪೮ ಲಕ್ಷ ಕೋಟಿ ಮುಂಗಡ ಪತ್ರ ಮಂಡಿಸುವ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಕಡೆಗೆ ದೃಢ ಹೆಜ್ಜೆ ಹಾಕಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ದೇಶ ನರಳುತ್ತಿತ್ತು ಎಂದೂ ಆರೋಪಿಸಿದರು.
ಬಿಜೆಪಿಯವರಾದ ನಮಗೆ ರಾಷ್ಟ್ರ ಹಿತವೇ ಮುಖ್ಯವಾಗಿದ್ದು, ಜಾತಿ ಬೇಧವೇ ಇಲ್ಲ. ಬಿಜೆಪಿಯೇ ಒಂದು ಜಾತಿಯಾಗಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಸಂಘಟನೆ ಬಲಿಷ್ಠವಾಗಿದ್ದು ಹೆಮ್ಮೆ ಪಡುವಂತಿದೆ. ಹಿಂದೆ ಪ್ರತಿಭಟನೆಗೆ ಹತ್ತು ಜನ ಸೇರಿಸುವುದು ಕಷ್ಟ ಸಾಧ್ಯವಾಗಿತ್ತು. ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ಅಂದು ನಾನು ಯುವಕ ನಾಗಿದ್ದರೂ ಇಂದಿಗೂ ಅದೇ ಉತ್ಸಾಹದಲ್ಲಿದ್ದೇನೆ ಎಂದೂ ಮಾರ್ಮಿಕವಾಗಿ ನುಡಿದರು.ಮಂಡಲದ ಅಧ್ಯಕ್ಷ ಹೆದ್ದೂರು ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಬೇಗುವಳ್ಳಿ ಸತೀಶ್, ರಾಘ ವೇಂದ್ರ ನಾಯಕ್, ಸಾಲೆಕೊಪ್ಪ ರಾಮಚಂದ್ರ, ಶಂಕರ ನಾರಾಯಣ ಐತಾಳ್, ಯಶೋದ ಮಂಜುನಾಥ್, ರಕ್ಷಿತ್ ಮೇಗರವಳ್ಳಿ, ತೂದೂರು ಮಧುರಾಜ ಹೆಗ್ಡೆ, ಮೋಹನ ಭಟ್, ಸಂತೋಷ್ ದೇವಾಡಿಗ ಹಾಗೂ ಕೆ.ಶ್ರೀನಿವಾಸ್ ಇದ್ದರು.