ಪಿಯು ಮುಗಿದ ತರುವಾಯ ಡಿಗ್ರಿನೇ ಮಾಡಬೇಕೆಂದೇನಿಲ್ಲ

KannadaprabhaNewsNetwork |  
Published : May 17, 2025, 01:27 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಮಾಹಿತಿ ಕಾರ್ಯಾಗಾರದಲ್ಲಿ ಪಿಯು ಡಿಡಿ ಪುಟ್ಟಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದ್ವಿತೀಯ ಪಿಯುಸಿ ಮುಗಿದ ನಂತರ ಡಿಗ್ರಿನೇ ಮಾಡಬೇಕೆಂದಿಲ್ಲ. ಅನೇಕ ವೃತ್ತಿ ಶಿಕ್ಷಣ ಕೋರ್ಸ್ ಗಳಿದ್ದು ಅಲ್ಲಿ ಪ್ರವೇಶ ಪಡೆಯುವುದರ ಮೂಲಕ ಉದ್ಯೋಗಾವಕಾಶಗಳ ನಿರೀಕ್ಷಿಸಬಹುದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ಹೇಳಿದರು.

ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯಲ್ಲಿ ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರಿನ ಕಾಲೇಜು ಮಾಹಿತಿ ಸಹಯೋಗದಲ್ಲಿ ಜಿಲ್ಲೆಯ ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗಾಗಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಪೂರ್ವ ಹಂತದಲ್ಲಿಯೇ ಉಪನ್ಯಾಸಕರು ಉನ್ನತ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಿ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದರು.

ಪದವಿ ಪೂರ್ವ ಶಿಕ್ಷಣ ನಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾಹಿತಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಪಿಯು ನಂತರ ಯಾವ ಶಿಕ್ಷಣ ಪಡೆದರೆ ಅನುಕೂಲವಾಗಲಿದೆ ಎಂಬ ಮಾಹಿತಿ ಪದವಿ ಪೂರ್ವ ಹಂತದಲ್ಲಿಯೇ ನೀಡಬೇಕು. ಇದರಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಉನ್ನತ ಶಿಕ್ಷಣ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ, ಸಲಹೆ-ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಉಪನ್ಯಾಸಕರು ಹೊರಬೇಕು ಎಂದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಪಿಯು ನಂತರ ಯಾವ ರೀತಿಯ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡರೆ ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಇದ್ದು, ಈ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆ ಇದೆ. ಇದರಿಂದಾಗಿ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಸರ್ವಾಂರ್ಗೀಣ ಪ್ರಗತಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ನೆರವಿಗಾಗಿ ಬ್ಯಾಂಕ್‍ಗಳು ಸಹ ಶೈಕ್ಷಣಿಕ ಸಾಲ ಸೌಲಭ್ಯವನ್ನು ನೀಡುತ್ತವೆ. ಇದರ ಜತೆಗೆ ಸರ್ಕಾರವು ಸಾಕಷ್ಟು ನೆರವು ನೀಡುತ್ತಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಿರ್ಮಾಣಕ್ಕೆ ನಾವೆಲ್ಲರೂ ಪಾತ್ರರಾಗೋಣ ಎಂದು ಅಭಿಪ್ರಾಯಪಟ್ಟರು.

ಎಸ್‍ಆರ್‌ಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಮಾತನಾಡಿ, ಪಿಯು ಹಂತದಲ್ಲಿ ಮಕ್ಕಳು ಸ್ಪಷ್ಟವಾಗಿ, ಗೊಂದಲಕ್ಕೆ ಒಳಗಾಗದಂತೆ ಪ್ರತಿಭೆಗೆ ಪೂರಕವಾದ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ಆಯುಕ್ತ ಪಿ.ವೈ. ದೇವರಾಜ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಸುಬ್ರಮಣ್ಯ, ನಾಜಿಯಾ, ಕಾಲೇಜು ಮಾಹಿತಿಯ ರಾಹುಲ್ ರೆಡ್ಡಿ, ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ