ಕನ್ನಡಪ್ರಭ ವಾರ್ತೆ ಮಳವಳ್ಳಿಶಾಸಕನಾಗಿದ್ದವರಿಗೆ ಒಂದು ಬಡಾವಣೆಯ ನಕ್ಷೆ, ರಸ್ತೆ ಹೇಗಿರಬೇಕು. ಭವಿಷ್ಯದಲ್ಲಿ ಜನರಿಗೆ ಏನು ಅನುಕೂಲ ಮಾಡಿಕೊಡಬೇಕೆಂಬ ತಿಳಿವಳಿಕೆ ಇಲ್ಲದವರ ಮಾತಿಗೆ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಛೇಡಿಸಿದರು.
ತಮ್ಮ 5 ವರ್ಷದ ಅವಧಿಯಲ್ಲಿ ಕಿರುಗಾವಲು ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆ, ತಿಟ್ಟಮಾರನಹಳ್ಳಿ ಏತ ನೀರಾವರಿ, ಪಟ್ಟಣದ 24*7 ಕುಡಿಯುವ ನೀರಿನ ಯೋಜನೆ, ಪೂರಿಗಾಲಿ ಹನಿನೀರಾವರಿ ಯೋಜನೆ ಸೇರಿದಂತೆ ಇತರೆ ಮುಂದುವರೆದ ಕಾಮಗಾರಿಗಳಲ್ಲಿ ಒಂದನ್ನೂ ಪೂರ್ಣಗೊಳಿಸಲು ಅವರಿಂದ ಆಗಿಲ್ಲ. ಅನುದಾನ ತಂದಿದ್ದರೇ ಕಾಮಗಾರಿ ಆರಂಭಿಸಬೇಕಿತ್ತು. ಕೇವಲ ಮಾತನಾಡಿದರೇ ಸಾಲದು ಸೇವೆ ಮಾಡುವ ಇಚ್ಛೆ ಹೊಂದಿರಬೇಕು ಎಂದರು.
ಕಟ್ಟೆ ಕಡೆಯ ರೈತನ ಜಮೀನುಗಳಿಗೆ ಸಮರ್ಪಕ ನೀರನ್ನು ಒದಗಿಸಲು ನಾಲಾ ಆಧುನೀಕರಣ ಮಾಡಲಾಗುತ್ತಿದೆ. ಕಾಮಗಾರಿಗಳು ಸಕಾಲಕ್ಕೆ ಪೂರೈಕೆಯಾಗುವಂತೆ ನಾನೇ ಖುದ್ದಾಗಿ ನಿಂತು ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.ಕೃಷಿಕ ಬದುಕಿನ ಜೊತೆಯಲ್ಲಿ ನಾಡಿನ ಸ್ತ್ರೀ ಸಾಮಾನ್ಯರಿಗೆ ಅವಶ್ಯಕತೆ ಇರುವ ಪ್ರತಿಯೊಂದು ಜವಾಬ್ದಾರಿಯನ್ನು ನಮ್ಮ ಸರ್ಕಾರ ಈಡೇರಿಸುತ್ತದೆ. ಬೇರೆಯವರ ರೀತಿಯಲ್ಲಿ ಸುಳ್ಳು, ಹಾಡು ಹೇಳಿಕೊಂಡು ಅಥವಾ ನಾಟಕವಾಡಿಕೊಂಡು ಕಾಲ ಕಳೆಯುತ್ತಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಅನುದಾನ ಕೊಟ್ಟಿದ್ದು ಎಷ್ಟು. ಅವರ ಖರ್ಚು ಮಾಡಿರುವುದು ಎಷ್ಟು ಇದನ್ನು ಅರ್ಥ ಮಾಡಿಕೊಂಡರೇ ಕನಕ ಭವನದ ಕಬ್ಬಿಣ ತುಕ್ಕು ಹಿಡಿಸಿರುವುದು ಯಾರು ಎಂದು ತಿಳಿಯುತ್ತದೆ. ಯಾರ ಅವಧಿಯಲ್ಲಿ ಯಾರು ತಹಸೀಲ್ದಾರ್ ಇದ್ದಾಗ ಸಾವಿರಾರು ಎಕರೆ ಭೂಮಿ ಪರಭಾರೆಯಾಗಿರುವುದು, ಪ್ರವಾಸಿ ಮಂದಿರದಲ್ಲಿ ಕುಳಿತು ತೀರ್ಮಾನ ಮಾಡುತ್ತಿದ್ದವರು ಯಾರು ಎನ್ನುವುದು ಅತಿ ಶೀಘ್ರದಲ್ಲಿಯೇ ತಿಳಿಯುತ್ತದೆ ಎಂದರು.