ಇಷ್ಟಲಿಂಗ ಪೂಜಿಸಿದರೆ ದೇವಾಲಯಗಳಿಗೆ ತೆರಳಬೇಕಿಲ್ಲ: ಪಂಡಿತಾರಾಧ್ಯ ಶ್ರೀ

KannadaprabhaNewsNetwork | Published : Feb 7, 2024 1:50 AM

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಧರ್ಮ ಎನ್ನುವುದು ಕಗ್ಗಂಟಾಗಿದ್ದು, ಬಾಹ್ಯ ಆಚರಣೆಗಳೇ ಧರ್ಮ ಎಂದು ಜನರು ಭಾವಿಸಿದ್ದು ಧರ್ಮ ಇರುವುದು ಬಾಹ್ಯ ಆಚರಣೆಗಲ್ಲ ಬದುಕಿನ ವೈಯಕ್ತಿಕ ಸಾಧನೆಗಳಲ್ಲಿ ಪ್ರಾಮಾಣಿಕವಾಗಿ ಬಾಳುವುದು, ಸರ್ವರ ಪ್ರೀತಿಸುವುದು, ನೀತಿಯುತ ಜೀವನ ನಡೆಸುವುದು ಇಂತಹ ಕೆಲವು ಮೌಲ್ಯಗಳು ಧರ್ಮದ ತಳಹದಿಯಾಗಿರಬೇಕು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಶರಣ ಪರಂಪರೆ ಒಪ್ಪುವವರು, ಇಷ್ಟಲಿಂಗ ಪೂಜಿಸುವವರು ಯಾವುದೇ ದೇವಾಲಯಗಳಿಗೆ ಹೋಗುವ ಅವಶ್ಯಕತೆ ಇಲ್ಲ. ದೇಹವೇ ದೇವಾಲಯ, ಎದೆ ಮೇಲಿರುವ ಲಿಂಗವೇ ಶಿವನಾಗಿದ್ದು, ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್, ಪಾಂಡೋಮಟ್ಟಿ ವಿರಕ್ತ ಮಠ, ಬಸವ ಬಳಗ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ಶಿವ ಬಸವೇಶ್ವರಸ್ವಾಮಿ ಗದ್ದಿಗೆ ಮಠದಲ್ಲಿ ಏರ್ಪಡಿಸಿದ್ದ 12ನೇ ವರ್ಷದ ದತ್ತಿ ಉಪನ್ಯಾಸ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವುದು ಶರಣರ ಸಂದೇಶವಾಗಿದ್ದು ಆ ಸಂದೇಶಕ್ಕೆ ತಕ್ಕ ಹಾಗೇ ಬದುಕನ್ನು ಕಟ್ಟಬೇಕೆಂಬುದು ನಮ್ಮ ಕನಸು ಎಂದರು.

ಪ್ರಸ್ತುತ ದಿನಗಳಲ್ಲಿ ಧರ್ಮ ಎನ್ನುವುದು ಕಗ್ಗಂಟಾಗಿದ್ದು, ಬಾಹ್ಯ ಆಚರಣೆಗಳೇ ಧರ್ಮ ಎಂದು ಜನರು ಭಾವಿಸಿದ್ದು ಧರ್ಮ ಇರುವುದು ಬಾಹ್ಯ ಆಚರಣೆಗಲ್ಲ ಬದುಕಿನ ವೈಯಕ್ತಿಕ ಸಾಧನೆಗಳಲ್ಲಿ ಪ್ರಾಮಾಣಿಕವಾಗಿ ಬಾಳುವುದು, ಸರ್ವರ ಪ್ರೀತಿಸುವುದು, ನೀತಿಯುತ ಜೀವನ ನಡೆಸುವುದು ಇಂತಹ ಕೆಲವು ಮೌಲ್ಯಗಳು ಧರ್ಮದ ತಳಹದಿಯಾಗಿರಬೇಕು ಇವುಗಳ ಗಾಳಿಗೆ ತೂರಿ ಆಚರಣೆಗಳ ಮಾತ್ರ ಪ್ರಧಾನವಾಗಿ ಇಟ್ಟುಕೊಂಡಿದ್ದೇವೆ ಶರಣರು ಆಚರಣೆ ಮತ್ತು ವಿಚಾರಕ್ಕೆ ಒತ್ತು ಕೊಟ್ಟವರು, ನಿಜವಾದ ಧರ್ಮ ಎಂದರೆ ತನ್ನನ್ನು ತಾನು ಅರ್ಥಮಾಡಿಕೊಳ್ಳುವುದು ಎಂದರು.

ಸಮಾರಂಭದಲ್ಲಿ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಗ್ಮದ ಮಾಜಿ ಅಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ತಾಲೂಕು ಶಸಾಪ ಅಧ್ಯಕ್ಷ ಎಂ.ಎಸ್.ಮಲ್ಲೇಶಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಎನ್.ಎಸ್.ರಾಜಪ್ಪ, ಸಾಹಿತಿ ಸರೋಜಾ ನಾಗರಾಜ್, ಶಿವರುದ್ರಪ್ಪ ಸೇರಿ ಗ್ರಾಮಸ್ಥರಿದ್ದರು.

Share this article