ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಈಗ ಒಬ್ಬ ಸಿಎಂ ಇರೋವಾಗ ಇನ್ನೊಬ್ಬ ಸಿಎಂ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇವೆಲ್ಲ ಗುಸುಗುಸು ಸುದ್ದಿಗಳು ಇದ್ದೇ ಇರ್ತಾವೆ. ಇನ್ನೊಬ್ಬ ಸಿಎಂ ಬೇಕು, ಇರೋ ಸಿಎಂ 5 ವರ್ಷ ಇರುತ್ತಾರೆ ಅನ್ನೋ ವಿಷಯ ಬೇಕಾಗಿಲ್ಲ. ಮುಂದುವರೆಯೋದು, ಬದಲಾವಣೆ ಆಗೋದು ಎನ್ನುವ ಮಾತು ಕೂಡ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜ್ಯದಲ್ಲಿ ಸಿಎಂ ಪೂರ್ಣಾವಧಿ ಪೂರೈಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಒಬ್ಬ ಸಿಎಂ ಇದ್ದಾಗ ಇದನ್ಯಾಕೆ ಚರ್ಚೆ ಮಾಡಬೇಕು ಎಂದು ಪ್ರಶ್ನಿಸಿದ ಸಚಿವರು, ಪಕ್ಷದಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆಗಳಿಲ್ಲ. ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ, ಏನಾಗುತ್ತೋ ನೋಡೋಣ ಎಂದರು.ಡಿಸಿಎಂ ಹುದ್ದೆ ಹೆಚ್ಚುವರಿ ಕಿರೀಟವೇನಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನೀವು ರಾಜಣ್ಣ ಅವರನ್ನೇ ಕೇಳಿ ಇದರ ಅರ್ಥವೇನು ಎಂದು, ನನ್ನನ್ನು ಕೇಳಬೇಡಿ. ಇಂತಹ ಚರ್ಚೆಗಳು ಬಹಿರಂಗವಾಗಿ ಆಗುವುದು ಸರಿಯಲ್ಲ. ಇದರ ಅವಶ್ಯಕತೆಯೂ ಇಲ್ಲ, ಪಕ್ಷ ಇದನ್ನೆಲ್ಲಾ ನೋಡುತ್ತಿದೆ. ಮುಂದೇನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳಲಿದೆ. ರಾಜಣ್ಣ ಸೇರಿದಂತೆ ನನ್ನ ಹಾಗೂ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳುತ್ತದೆ. ಇದೆಲ್ಲ ಚರ್ಚೆ ಅನವಶ್ಯಕ ಎಂದು ತಿಳಿಸಿದರು.
ಜಾರಕಿಹೊಳಿ, ರಾಜಣ್ಣ ಸೇರಿದಂತೆ ಹಲವು ಸಚಿವರು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿಗೆ ಆಕ್ಷೇಪಣೆ ವಿಚಾರ ಪ್ರಸ್ತಾಪಿಸಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಪೈಪೋಟಿ ಇದ್ದೇ ಇರುತ್ತದೆ. ಪೈಪೋಟಿ ಇಲ್ಲದೆ ರಾಜಕಾರಣ ಮಾಡೋಕೆ ಆಗೋದಿಲ್ಲ, ಎಲ್ಲರಿಗೂ ಆಸೆ ಇರುತ್ತದೆ. ಆಸೆಗಳಿದ್ರೇನೆ ಎಲ್ಲರೂ ರಾಜಕೀಯಕ್ಕೆ ಬರೋದು, ಇದೇನು ದೊಡ್ಡ ವಿಷಯವಲ್ಲ, ಇದರಿಂದ ಪಕ್ಷದಲ್ಲಿ ಬಿರುಕಿದೆ ಎಂದರ್ಥ ಅಲ್ಲ. ಕೆಲವೊಬ್ಬರ ಹೇಳಿಕೆ ಬಹಿರಂಗವಾಗಿವೆ, ಪ್ರತಿಷ್ಠೆಗಳಿವೆ ಹೊರತು ಬೇರೇನೂ ಇಲ್ಲ ಎಂದು ಹೇಳಿದರು.ಬಿಜೆಪಿ ಬಿರುಕು ಬಿಟ್ಟು, ಒಬ್ಬರ ಮೇಲೊಬ್ಬರು ದ್ವೇಷ ಸಾಧಿಸುವ ಪಕ್ಷವಾಗಿದೆ. ನಮ್ಮದು ಹಾಗಿಲ್ಲ, ನಮ್ಮಲ್ಲಿರೋ ಸಣ್ಣ ವಿಷಯವೆಲ್ಲ ಶೀಘ್ರ ಇತ್ಯರ್ಥವಾಗಲಿವೆ ಎಂದು ಹೇಳಿದರು.
ಒಂದೊಂದು ಸುದ್ದಿ ದೊಡ್ಡ ಸುದ್ದಿ ಆಗ್ತಾವೆ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇವತ್ತು 30 ರಿಂದ 50 ಹೊಸ ಟಿವಿ ಮತ್ತು ಪತ್ರಿಕೆಗಳಾಗಿವೆ. ಒಂದೊಂದು ಸುದ್ದಿ ದೊಡ್ಡ ಸುದ್ದಿ ಆಗುತ್ತಿವೆ. ಅದರಿಂದೇನೂ ಅಲ್ಲೋಲ ಕಲ್ಲೋಲ ಆಗೋಲ್ಲ. ಜಾರಕಿಹೊಳಿ, ರಾಜಣ್ಣ ಲೀಡರ್ಸ್, ಪರಮೇಶ್ವರ ಮಾಜಿ ಅಧ್ಯಕ್ಷರು, ಡಿಕೆಶಿ ಅಧ್ಯಕ್ಷರು, ನಾನು ಸಹ ಹಿಂದೆ ಅಧ್ಯಕ್ಷ ಆಗಿದ್ದೆ. ನಾನು ದೆಹಲಿಗೆ ಹೋದರೆ ನೀವು ಅದನ್ನ ಬರೆಯೋದೆ ಇಲ್ಲ. ಬೇರೆಯವರು ಹೋದ್ರೆ ನೀವು ಹೇಳ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.