ಪ್ರವೀಣ ಘೋರ್ಪಡೆ
ಕನ್ನಡಪ್ರಭ ವಾರ್ತೆ ತಾಳಿಕೋಟೆಬರಗಾಲ ಹಿನ್ನೆಲೆಯಲ್ಲಿ ನೀರು, ಮೇವು ಇಲ್ಲದೇ ಜಾನುವಾರುಗಳನ್ನು ಸಾಕುವುದು ಅನ್ನದಾತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತಾಳಿಕೋಟೆಯ ಸಾಂಭ ಪ್ರಭು ಶರಣಮುತ್ಯಾರ ಜಾತ್ರೋತ್ಸವದ ಅಂಗವಾಗಿ ನಡೆದ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರು ಮಾರುವವರ ಸಂಖ್ಯೆಯೇ ಅಧಿಕವಾಗಿದೆ. ಆದರೆ, ಕೊಳ್ಳುವವರ ಸಂಖ್ಯೆ ವಿರಳವಾತ್ತು.ಸತತ ಬರಗಾಲದ ಬವಣೆಗೆ ತುತ್ತಾಗುತ್ತಾ ಬಂದಿರುವ ಈ ಭಾಗದ ರೈತಾಪಿ ಜನತೆ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಾಕಣೆ ಕಡಿಮೆಗೊಳಿಸುತ್ತಾ ಬಂದಿದ್ದಾರೆ. ಇದರ ನಡುವೆಯೂ ಬರಗಾಲದಲ್ಲಿ ಮೇವಿನ ಕೊರತೆ ನೀಗಿಸಲಾಗದ್ದಕ್ಕೆ ಜಾನುವಾರುಗಳ ಸಂತೆಯತ್ತ ರೈತರು ಹೆಜ್ಜೆ ಇಡುತ್ತಿದ್ದಾರೆ. ಆದರೆ ಇಂದು ಮಾರಾಟವಾಗದಿದ್ದರೇನು ನಾಳೆ ಮಾರುತ್ತದೆ ಎಂಬ ರೈತರ ಧೈರ್ಯದ ಮಾತುಗಳು ಜಾನುವಾರುಗಳ ದರ ಗಗನಕ್ಕೇರಲು ಕಾರಣ ಎನ್ನಲಾಗುತ್ತಿದೆ.
ಸಾಂಭಪ್ರಭು ಶರಣಮುತ್ಯಾರ ಜಾತ್ರೋತ್ಸವದ ಅಂಗವಾಗಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ೭೦ ಸಾವಿರ ರು.ಗೆ ಒಂದು ಜೋಡೆತ್ತುಗಳಿಂದ ೧ ಲಕ್ಷ ೫೦ ಸಾವಿರದವರೆಗೆ ಮಾರಾಟವಾಗಿವೆ. ಬರಗಾಲದ ನಡುವೆ ದನಗಳ ದರ ಈ ಬಾರಿ ಕುಸಿಯಬಹುದು ಎಂಬ ಆಶಾಭಾವನೆಯಿಂದ ಕೊಂಡುಕೊಳ್ಳಲು ಆಗಮಿಸಿದ ಜನರಿಗೆ ನಿರಾಸೆ ಉಂಟಾಗಿದೆ. ಕೆಲವು ಬಡ ರೈತರು ದರ ಏರಿಳಿತ ಮಾಡುವುದರೊಂದಿಗೆ ತಾವು ತಂದಿದ್ದ ದನಗಳನ್ನು ಮಾರಾಟ ಮಾಡಿ ತೆರಳಿದರು. ಈ ದನಗಳ ಜಾತ್ರೆಯಲ್ಲಿ ಬ.ಬಾಗೇವಾಡಿ ತಾಲೂಕು ಒಳಗೊಂಡು ಮುದ್ದೇಬಿಹಾಳ, ದೇವರ ಹಿಪ್ಪರಗಿ, ಹುಣಸಗಿ, ತಾಲೂಕು ಒಳಗೊಂಡಂತೆ ಅನೇಕ ಭಾಗಗಳಿಂದ ಸಾವಿರಾರು ದನಗಳು ಈ ಜಾತ್ರೋತ್ಸವದಲ್ಲಿ ಭಾಗಿಯಾಗಿದ್ದವು.ಹಗ್ಗದ ವ್ಯಾಪಾರವು ಕುಂಠಿತ:
ಪ್ರತಿವರ್ಷ ಸಾಂಭಪ್ರಭು ಶರಣಮುತ್ಯಾರ ದನಗಳ ಜಾತ್ರೋತ್ಸವದಲ್ಲಿ ದನಗಳ ಸಿಂಗಾರಕ್ಕೆ ಸಂಬಂಧಿಸಿದ ಹಗ್ಗ ಮತ್ತು ಗೆಜ್ಜೆ ನಾದದ ಸರಗಳ ವ್ಯಾಪಾರವು ಬರದಿಂದ ಸಾಗುತ್ತಿತ್ತು. ಆದರೆ, ಈ ಬಾರಿ ವ್ಯಾಪಾರದಲ್ಲಿ ಬಹಳಷ್ಟು ಕುಂಠಿತಗೊಂಡಿದೆ.ದನಗಳ ಜಾತ್ರೋತ್ಸವದಲ್ಲಿ ದನಗಳಿಗೆ ಮತ್ತು ರೈತಾಪಿ ಜನತೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಾತ್ರಾ ಉತ್ಸವ ಕಮಿಟಿಯ ವತಿಯಿಂದ ಕೈಗೊಳ್ಳಲಾಗಿತ್ತು.
ಇದ್ದೂ ಇಲ್ಲದಂತಾದ ಎಪಿಎಂಸಿ:ಪ್ರತಿವರ್ಷವು ದನಗಳ ಜಾತ್ರೋತ್ಸವದ ಸಮಯದಲ್ಲಿ ದನಗಳಿಗೆ ಮತ್ತು ರೈತಾಪಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವುದರೊಂದಿಗೆ ಉತ್ತಮ ತಳಿ ಜಾನುವಾರುಗಳ ಆಯ್ಕೆ ಮಾಡಿ ಬುಹುಮಾನ ನೀಡುವುದರೊಂದಿಗೆ ರೈತಾಪಿ ಜನತೆಗೆ ಪ್ರೋತ್ಸಾಹಿಸುತ್ತಾ ಬರಲಾಗುತ್ತಿತ್ತು. ಆದರೆ ಕಳೆದ ೨ ವರ್ಷಗಳಿಂದ ದನಗಳ ಜಾತ್ರೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ವಿದ್ಯುತ್ ದೀಪದ ವ್ಯವಸ್ಥೆಯಾಗಲಿ ಮಾಡಲಾಗಿಲ್ಲ. ಉತ್ತಮ ತಳಿ ಜಾನುವಾರುಗಳನ್ನು ಆಯ್ಕೆಗೊಳಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುವಂತಹ ಕಾರ್ಯ ಎಪಿಎಂಸಿ ಅಧಿಕಾರಿಗಳಿಂದ ಮಾಡದೇ ಹಿಂದಕ್ಕೆ ಸರಿದಿರುವುದು ರೈತಾಪಿ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
---ದನಗಳ ಜಾತ್ರೆಯಲ್ಲಿ ಪ್ರತಿವರ್ಷವು ಹಗ್ಗದ ಇನ್ನಿತರ ವ್ಯಾಪಾರದಲ್ಲಿ ದರ ಕಡಿಮೆ ಇದ್ದರೂ ವ್ಯಾಪಾರವು ಜೋರಾಗಿ ಇರುತ್ತಿತ್ತು. ಆದರೆ ಈ ಬಾರಿ ದರದಲ್ಲಿಯೂ ವ್ಯತ್ಯಾಸವಾಗಿದೆ. ಆದರೆ ಕೊಂಡುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿದುಹೋಗಿದೆ. ೫ ದಿನಗಳ ಕಾಲ ಟೆಂಟ್ ಹಾಕಿ ಅಂಗಡಿ ಹಾಕಿದ್ದರ ಬಾಡಿಗೆ ಕೂಡಾ ಆಗಿಲ್ಲ.
- ಸುರೇಶ ತುಕಾರಾಮ ಸೋನೋನೆ, ಹಗ್ಗದ ವ್ಯಾಪಾರಿ