ಸನಾತನ ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಇನ್ನೊಂದಿಲ್ಲ: ಸುಬುಧೇಂದ್ರ ತೀರ್ಥ ಸ್ವಾಮೀಜಿ

KannadaprabhaNewsNetwork |  
Published : Mar 26, 2024, 01:15 AM IST
 ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡಿರುವುದು | Kannada Prabha

ಸಾರಾಂಶ

ಮಕ್ಕಳಿಗೆ ಹಿಂದೂ ಧರ್ಮದ ಶ್ರದ್ಧೆಯ ಮಹತ್ವವನ್ನು ತಿಳಿಸಿಕೊಡಬೇಕು. ಹಿಂದು ಧರ್ಮದ ಜಾಗೃತಿಯಾಗಬೇಕು. ನಮ್ಮ ದೇಶ ಜಗದ್ಗುರುವಾಗಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಹೊನ್ನಾವರ: ನಮ್ಮ ಸನಾತನ ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಇನ್ನೊಂದಿಲ್ಲ. ಅದು ಪರಧರ್ಮದ ಸಹಿಷ್ಣುವಾಗಿದೆ. ಆದರೆ ಪರಕೀಯರು ಹಿಂದು ಧರ್ಮದ ಅಸಹಿಷ್ಣುಗಳಾಗಿದ್ದಾರೆ. ಹಿಂದು ಧರ್ಮ ಗಟ್ಟಿಯಾಗಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ತಾಲೂಕಿನ ಶ್ರೀಕ್ಷೇತ್ರ ಮುಗ್ವಾದ ಶ್ರೀ ಸುಬ್ರಹ್ಮಣ್ಯ ದೇವಾಲಯದ ಶ್ರೀ ಮಯೂರ ಸಭಾಭವನದಲ್ಲಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಮಕ್ಕಳಿಗೆ ಹಿಂದೂ ಧರ್ಮದ ಶ್ರದ್ಧೆಯ ಮಹತ್ವವನ್ನು ತಿಳಿಸಿಕೊಡಬೇಕು. ಹಿಂದು ಧರ್ಮದ ಜಾಗೃತಿಯಾಗಬೇಕು. ನಮ್ಮ ದೇಶ ಜಗದ್ಗುರುವಾಗಬೇಕು. ಹಿಂದು ಧರ್ಮ ಯಾವ ಕಾರಣಕ್ಕೂ ಕೂಡ ಅಳಿಯಬಾರದು. ಧರ್ಮಾಂತರವಾಗಬಾರದು ಎಂದು ಶ್ರೀಗಳು ನುಡಿದರು.ರಾಮನಾಮ ಸ್ಮರಣೆಯಿಂದ ಪಾಪ ಕರ್ಮಗಳು ನಾಶವಾಗುತ್ತದೆ. ಪುಣ್ಯದ ಫಲ ಲಭಿಸುತ್ತದೆ. ನಮ್ಮ ಮನಸ್ಸು ಶುದ್ಧಂತರಣ ಮಾಡುತ್ತದೆ. ಇಂದು ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠೆಯಾಗಿದ್ದಾನೆ. ಆದರೆ ನಮ್ಮ ಹೃದಯದಲ್ಲಿ ರಾಮ ಪ್ರತಿಷ್ಠೆಯಾಗಬೇಕು. ಆ ಮೂಲಕ ನಮ್ಮಲ್ಲಿನ ದ್ವೇಷ ಅಸೂಯೆ, ಕ್ರೋಧ ಎಲ್ಲ ಹೊರ ಹಾಕಬೇಕು. ಜ್ಞಾನಿಗಳು ಸಹ ರಾಮನಾಮ ಸ್ಮರಣೆ ಮಾಡಿದ್ದಾರೆ. ಸದಾ ಕಾಲದಲ್ಲೂ ರಾಮನನ್ನೇ ನೆನೆದು ಪೂಜಿಸಿದ ಮಹಾನುಭಾವರು ರಾಘವೇಂದ್ರ ಸ್ವಾಮಿಗಳು ಕಲ್ಪವೃಕ್ಷರಾಗಿದ್ದಾರೆ. ಜಾತ್ಯತೀತವಾಗಿ, ಭಾಷಾತೀತವಾಗಿ, ಪ್ರಾಂತ್ಯಾತೀತವಾಗಿ ಎಲ್ಲ ಸಮುದಾಯದವರಿಗೂ ಅವರು ಪೂಜ್ಯರಾಗಿದ್ದಾರೆ. ಅಂತಹ ರಾಯರನ್ನು ನೆನೆದರೆ ಅವನತಿಯಲ್ಲಿದ್ದವರೂ ಉನ್ನತಿಗೆ ತಲುಪುತ್ತಾರೆ ಎಂದು ರಾಯರ ಮಹಿಮೆ ತಿಳಿಸಿದರು. ಭಕ್ತಾದಿಗಳ ಸಹಕಾರದ ಮೂಲಕ ಶ್ರೀಗಳ ಸ್ವಾಗತ ಸಮಿತಿಯಿಂದ ಸಂಗ್ರಹವಾದ ₹1 ಲಕ್ಷ ಕಾಣಿಕೆಗೆ ತಮ್ಮ ₹10 ಸಾವಿರ ಸೇರಿಸಿ ಸುಬ್ರಹ್ಮಣ್ಯ ದೇವಾಲಯಕ್ಕೆ ದಾನವಾಗಿ ನೀಡಿದರು.ಪುಸ್ತಕ ಬಿಡುಗಡೆ: ಮುಗ್ವಾದ ಶ್ರೀ ರಾಘವೇಶ್ವರ ಭಾರತೀ ಸಂಸ್ಕೃ ಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಗಣಪತಿ ಭಟ್ ಬರೆದ ಮಂತ್ರಾಲಯ ಪ್ರಭು ಮಹಾಪ್ರಭು ಪುಸ್ತಕವವನ್ನು ಶ್ರೀಗಳು ಬಿಡುಗಡೆ ಮಾಡಿದರು. ವಿದ್ವಾನ್ ವಿ.ಜಿ. ಹೆಗಡೆ ಗುಡ್ಗೆ ಪುಸ್ತಕ ಪರಿಚಯ ಮಾಡಿದರು.ಸನ್ಮಾನ: ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃ ಡಾ. ಮಹಾಮಹೋಪಾಧ್ಯಾಯ ರಾಜಾ ಎಸ್. ಗಿರಿ ಆಚಾರ್ಯ, ವಿದ್ವಾನ್ ಕಡಪ ರಾಘವೇಂದ್ರಾಚಾರ್ಯ, ಡಾ. ಅಕ್ಕಿ ರಾಘವೇಂದ್ರಾಚಾರ್ಯ, ಡಾ. ಎನ್. ವಾದಿರಾಜಾಚಾರ್ಯ, ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವೇ.ಮೂ. ರಾಮಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗಡೆ ಸ್ವಾಗತಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಜಿ. ಶಂಕರ, ಶಿವಾನಂದ ಹೆಗಡೆ ಕಡತೋಕಾ, ಆರ್.ಎಸ್. ರಾಯ್ಕರ, ಯೋಗೇಶ ರಾಯ್ಕರ, ಶಿವರಾಜ ಮೇಸ್ತ, ಪ್ರಮೋದ ಹೆಗಡೆ ಯಲ್ಲಾಪುರ, ಅಶೋಕ ಭಟ್, ಎಸ್.ಆರ್. ಹೆಗಡೆ ಕಣ್ಣಿ, ಎಂ.ಎಸ್. ಹೆಗಡೆ ಕಣ್ಣಿಮನೆ ಮತ್ತಿತರರು ಉಪಸ್ಥಿತರಿದ್ದರು..

ಪಾದಪೂಜೆ: ಬೆಳಗ್ಗೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಪಾದಪೂಜೆ ಮತ್ತು ಭಿಕ್ಷೆ ನೆರವೇರಿಸಲಾಯಿತು. ವಿದ್ವಾನ್ ಕೊಡಂಗಲ್ ರಾಘವೇಂದ್ರಾಚಾರ್ಯ ಮಂತ್ರಾಲಯ ಅವರಿಂದ ಉಪನ್ಯಾಸ ನಡೆಯಿತು.ರವಿವಾರ ಸಂಜೆ ಶ್ರೀ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!