ಚನ್ನಪಟ್ಟಣ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದ್ದು, ಬಡವರು ಬದುಕದ, ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ಸರ್ಕಾರವನ್ನು ತೆಗೆಯುವ ತನಕ ರಾಜ್ಯಕ್ಕೆ ನೆಮ್ಮದಿ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹರಿಹಾಯ್ದರು.
ಚನ್ನಪಟ್ಟಣ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಬಗ್ಗೆ ನಾನು ಯಾವಾಗಲೂ ಮಾತಾಡಿರಲಿಲ್ಲ. ಇವರ ಲೂಟಿ ನೋಡಲಾರದೆ ನಿನ್ನೆಯಿಂದ ಮಾತನಾಡುತ್ತಿದ್ದೇನೆ ಎಂದರು.ನಾನು ಇಂದು ಮುಖ್ಯಮಂತ್ರಿ, ನಾಳೆಯೂ ಮುಖ್ಯಮಂತ್ರಿ ಅಂತ ಹೇಳುತ್ತಾರೆ. ಇಷ್ಟಾದರೂ ಹೀಗೆಲ್ಲಾ ಮಾತನಾಡುತ್ತೀರಾ ಅಯ್ಯೋ ರಾಮ ಅಂತ ಸಿದ್ದರಾಮಯ್ಯನವರು ಲೋಕಾಯುಕ್ತ ವಿಚಾರಣೆ ಎದುರಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವ್ಯಂಗ್ಯವಾಡಿದರು.
ಅಂಬೇಡ್ಕರ್ ಹೆಸರು ಹೇಳುತ್ತಿರುವ ಇಬ್ಬರು ಮಹಾನ್ ನಾಯಕರು ರಾಜ್ಯವನ್ನು ಆಳುತ್ತಿದ್ದಾರೆ. ಅವರ 5 ಗ್ಯಾರಂಟಿಗಳ ಪೈಕಿ 4ನೇ ಗ್ಯಾರಂಟಿ ಅಲ್ಲಾಡುತ್ತಿದೆ. ಇದನ್ನು ನಾನು ಹೇಳುತ್ತಿಲ್ಲ. ಅವರದೇ ಸಂಪುಟದ ಸಚಿವರು ಹೇಳುತ್ತಿದ್ದಾರೆ. ಖಜಾನೆಯಲ್ಲಿ ಏಕೆ ಕಾಸು ಇಲ್ಲವಾ. ಈ ಸರ್ಕಾರದಲ್ಲಿ ಎಲ್ಲರು ತಿಂದು ತೆಗುತ್ತಿದ್ದಾರೆ ಎಂದು ಟೀಕಿಸಿದರು.ಸಾಮಾನ್ಯ ಸಮುದಾಯದ ವ್ಯಕ್ತಿಯನ್ನು ನಾನು ಮಂತ್ರಿಯನ್ನಾಗಿ ಮಾಡಿದೆ. ಗಂಗಾಮತಸ್ಥ ಸಮುದಾಯದ ಚಿನ್ನಸ್ವಾಮಿ ಯನ್ನು ವಿಧಾನಸೌಧಕ್ಕೆ ಕಳುಹಿಸುವ ಕೆಲಸ ಮಾಡುತ್ತೇನೆ. ಶಾಸಕರಾಗಿಯೋ, ಪರಿಷತ್ ಸದಸ್ಯರಾಗಿಯೊ ಮಾಡುತ್ತೇವೆ ಎಂದು ತಿಳಿಸಿದರು.
ಈ ಕ್ಷೇತ್ರಕ್ಕಾಗಿ ನಾನು ಏನು ಮಾಡಿದೆ ಅಂತ ಹೇಳುವುದಿಲ್ಲ. ನೀವೇ ನನ್ನ ಕೆಲಸದ ಪಟ್ಟಿ ಮಾಡಿ, ನಿಖಿಲ್ ಪರ ಕೈ ಚಾಚಲು ನಿಮ್ಮ ಮುಂದೆ ಬಂದಿದ್ದೇನೆ. ಹೈನುಗಾರಿಕೆಗೆ ಈ ಕ್ಷೇತ್ರದಲ್ಲಿ ನಾನು ಶಕ್ತಿ ಕೊಟ್ಟವನು.ಅಮೂಲ್ ಸಂಸ್ಥೆ ಕಾರ್ಯಕ್ರಮದಲ್ಲಿ ಕುರಿಯನ್ ಅವರಿಗೆ ಒಂದು ಮಿಲ್ಕ್ ಫೆಡರೇಷನ್ ರಾಜ್ಯದಲ್ಲಿ ಸ್ಥಾಪನೆ ಮಾಡಿ ಅಂತ ಕೇಳಿದೆ. ಇದಕ್ಕೆ ಅವರು ಆಗಲ್ಲ ಅಂದಿದ್ದರು. ದೇಶಕ್ಕೊಂದೆ ತಾಜ್ ಮಹಲ್ - ಹಾಗೆಯೇ ಒಂದು ಸಂಸ್ಥೆ ಮಾತ್ರ ಕಟ್ಟಲು ಸಾಧ್ಯವೆಂದು ಹೇಳಿದ್ದರು. ಅದನ್ನು ನಾನು ಸವಾಲಾಗಿ ಸ್ವೀಕರಿಸಿ ರಾಜ್ಯದಲ್ಲಿ ಮಿಲ್ಕ್ ಫೆಡರೇಶನ್ ಸ್ಥಾಪಿಸಿದೆ ಎಂದು ಹೇಳಿದರು.ಇಗ್ಗಲೂರು ಡ್ಯಾಂ ನಾನು ಕಟ್ಟಿಸಿದೆ. ಆದರೆ, ಅವರಾರೊ ಭಗೀರಥ, ನಾನು ನೀರು ತಂದೆ ಅನ್ನುತ್ತಿದ್ದಾರೆ. ಇದು ಈ ರೈತನ ಮಗನ ಕೆಲಸ. ನಾನು ಸಾಮಾನ್ಯ ರೈತನ ಮಗ. ರೈತರ ಕಷ್ಟ ಏನಂತ ನನಗೆ ಗೊತ್ತು. ನಾನು ಮೊಮ್ಮಗನನ್ನು ಗೆಲ್ಲಿಸಲು ಬಂದಿದ್ದಾರೆ ಅಂತಾ ಟೀಕೆ ಮಾಡುತ್ತಾರೆ. ನಾನು ನಿಮ್ಮ ಆಶೀರ್ವಾದದ ಬಲದಿಂದ ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ದೇಹದಲ್ಲಿ ಕೊನೆ ಉಸಿರು ಇರುವರೆಗೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಕನಕಪುರಕ್ಕೆ ಹೋಗಿ ನೋಡಿಕೊಂಡು ಬನ್ನಿ. ಅಪೂರ್ವ ಸಹೋದರರು ಬೇರೆಯವರ ಜಮೀನನ್ನು ಹೇಗೆ ಲೂಟಿ ಮಾಡಿದ್ದಾರೆ ಅಂತ ನೋಡಿಕೊಂಡು ಬನ್ನಿ. 6 ತಿಂಗಳಲ್ಲಿ ನಾನೇ ಅಭ್ಯರ್ಥಿ ಅಂದರು. ಸುಳ್ಳು ಹೇಳಿ, ಮತ್ತೊಬ್ಬರನ್ನು ಕರೆದುಕೊಂಡು ತಂದು ನಿಲ್ಲಿಸಿದವರಿಗೆ ತಕ್ಕಪಾಠ ಕಲಿಸಿ ಎಂದು ಡಿಕೆ ಸಹೋದರರ ವಿರುದ್ಧ ದೇವೇಗೌಡರು ಕಿಡಿಕಾರಿದರು.---------------------------
7ಕೆಆರ್ ಎಂಎನ್ 1.ಜೆಪಿಜಿಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಚುನಾವಣಾ ಪ್ರಚಾರ ನಡೆಸಿದರು.
--------------------------