ಹುಬ್ಬಳ್ಳಿ:
ಜೋಶಿ ಕೈವಾಡವಿಲ್ಲ:ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾತ್ರವಿದೆ ಎಂದು ದಿಂಗಾಲೇಶ್ವರ ಶ್ರೀಗಳು ಮಾಡಿದ ಆರೋಪಕ್ಕೆ ಉತ್ತರಿಸಿದ ಬಿಎಸ್‌ವೈ, ಇದರಲ್ಲಿ ಜೋಶಿ ಅವರ ಯಾವುದೇ ಪಾತ್ರವಿಲ್ಲ. ಅವರೊಬ್ಬ ಧೀಮಂತ ನಾಯಕ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಅಸಮಧಾನವಿಲ್ಲ:ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ಎಲ್ಲವೂ ಸರಿ ಹೋಗಿದೆ. ದಾವಣಗೆರೆಯಲ್ಲಿ ಅಸಮಾಧಾನವಿತ್ತು, ಅಲ್ಲಿಗೆ ಹೋಗಿ ಸರಿಪಡಿಸಿದ್ದೇನೆ. ಬೆಳಗಾವಿಯಲ್ಲಿ ಶೆಟ್ಟರ್ ವಿರುದ್ಧ ಅಸಮಾಧಾನವಿತ್ತು, ಅಲ್ಲೂ ಸರಿಪಡಿಸಿದ್ದೇನೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಪ್ಪು ಗ್ರಹಿಕೆಯಿಂದ ಮಾತನಾಡಿದ್ದಾರೆ. ಅವರ ಜತೆ ಚರ್ಚಿಸಲಾಗುತ್ತಿದೆ. ಎಲ್ಲವೂ ಸರಿ ಹೋಗುತ್ತದೆ ಎಂದರು.ದೇವೇಗೌಡ ಪ್ರಚಾರಕ್ಕೆ:ಲೋಕಸಭಾ ಚುನಾವಣೆ ಪ್ರಚಾರಕ್ಕೆ ನಮ್ಮೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬರುವುದಾಗಿ ತಿಳಿಸಿದ್ದಾರೆ. ಅವರ ಪ್ರಚಾರದಿಂದ ನಮಗೆ ಇನ್ನೂ ಹೆಚ್ಚಿನ ಶಕ್ತಿ ದೊರಕಲಿದೆ ಎಂದು ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು:ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರುವವರ ದೊಡ್ಡ ಪಟ್ಟಿ ಇದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೂ ಕಾಂಗ್ರೆಸ್ಸಿಗೆ ಹೋಗುವುದಿಲ್ಲ, ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಅಂತಹ ಹಡಗಿಗೆ ಹೋಗಿ ಯಾರು ಮುಳುಗುತ್ತಾರೆ, ಡಿಕೆಶಿ ಸುಮ್ಮನೆ ಹಸಿಸುಳ್ಳು ಹೇಳುತ್ತಾರೆ ಎಂದ ಅವರು, ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ವಾತಾವರಣ ಇದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ 28ಕ್ಕೆ 28 ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಸರಿಯಾಗಿ ನೀಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಎಸ್ಸಿ, ಎಶ್ಟಿ ಮೀಸಲಿಟ್ಟ ಹಣ ಬೇರೆ ಬೇರೆ ಯೋಜನೆಗೆ ಬಳಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಅಂತಹವರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಡಾ. ಕ್ರಾಂತಿಕಿರಣ, ಪಾಲಿಕೆ ಮೇಯರ್ ವೀಣಾ ಬರದ್ವಾಡ ಸೇರಿದಂತೆ ಹಲವರಿದ್ದರು.