ಮಾಗಡಿ: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬಲಿಷ್ಠವಾಗಿದ್ದು ಹಾದಿ ಬೀದಿಯಲ್ಲಿ ಶಾಸಕರು ಸಿಎಂ ಬದಲಾವಣೆ ವಿಚಾರವಾಗಿ ಚರ್ಚೆ ಮಾಡುವುದು ಬೇಡ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಲಹೆ ನೀಡಿದರು.
ತಾಲೂಕಿನ ಸಾತನೂರು ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಯಾರೋ ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡೋದನ್ನ ಹೈಕಮಾಂಡ್ ತೀರ್ಮಾನಿಸ್ತಾರೆ. ನಾನು ಯಾರನ್ನೂ ಮುಖ್ಯಮಂತ್ರಿ ಮಾಡೋಕೂ ಆಗಲ್ಲ, ಇಳಿಸೋಕು ಆಗಲ್ಲ. ನಮಗೆ ಪಕ್ಷದ ತತ್ವ ಸಿದ್ಧಾಂತ ಇದ್ದು ಹೈಕಮಾಂಡ್ ಸಿಎಂ ಸ್ಥಾನದ ಬಗ್ಗೆ ತೀರ್ಮಾನ ಮಾಡುತ್ತಾರೆ. ಇದನ್ನ ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ಬಾಲಕೃಷ್ಣ ಹೇಳಿದರು.
ಚಂದ್ರಶೇಖರ ಸ್ವಾಮೀಜಿಗಳು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. ಅದನ್ನ ಬಿಟ್ಟು ರಾಜಕಾರಣಿಗಳು ಸಿಎಂ ವಿಚಾರವಾಗಿ ಮಾತನಾಡಿದಾಗ ದೊಡ್ಡ ಸುದ್ದಿಯಾಗುತ್ತದೆ. ಬೇರೆ ಯಾರೇ ಮಾತನಾಡಿದರೂ ಸುದ್ದಿಯಾಗಲ್ಲ. ಸ್ವಾಮೀಜಿ ಹೇಳಿಕೆ ಬಗ್ಗೆ ಟೀಕೆ ಮಾಡಿದ ಸಚಿವ ಕೆ.ಎನ್.ರಾಜಣ್ಣ ವಿಚಾರ ಸ್ವಾಮೀಜಿಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಎಲ್ಲಾ ಸ್ವಾಮೀಜಿಗಳು ಅವರವರ ಸಮುದಾಯದವರು ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ. ಹೀಗಾಗಿ ರಾಜಕಾರಣಿಗಳು ತಮ್ಮ ಇತಿಮಿತಿಯಲ್ಲಿ ವರ್ತಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಇದೆಲ್ಲಾ ಕೇವಲ ಮಾಧ್ಯಮದ ಸೃಷ್ಟಿಯಷ್ಟೇ. ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ.
ಪಕ್ಷ ಬಲವರ್ಧನೆ ಬಗ್ಗೆ ಚರ್ಚೆಯಾಗಿದೆ. ಅಧ್ಯಕ್ಷ ಸ್ಥಾನ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಮಾಧ್ಯಮಗಳಲ್ಲಿ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದರೆ ಒಂದು ರೀತಿ ಸುದ್ದಿಯಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರೆ ಮತ್ತೊಂದು ರೀತಿ ಚರ್ಚೆ ಆಗುತ್ತದೆ. ಯಾವ ಪಕ್ಷ ಬಲಿಷ್ಠವಾಗಿರುತ್ತದೆಯೋ ಅಲ್ಲಿ ಈ ರೀತಿ ಅಧಿಕಾರ ಪಡೆಯಲು ಪೈಪೋಟಿ ಏರ್ಪಟ್ಟಿರುತ್ತದೆ. ನಮ್ಮ ಪಕ್ಷದ ಹೈಕಮಾಂಡ್ ಬಲಿಷ್ಠವಾಗಿದ್ದು, ಇದನ್ನೆಲ್ಲಾ ನಿಭಾಯಿಸುವ ಶಕ್ತಿ ಇದೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಚಾಲನೆ: ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ಡೇರಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ತಾಲೂಕಿನ ಕೊಂಡನಹಳ್ಳಿ ಗ್ರಾಮದಲ್ಲಿ ಒಂದು ಕೋಟಿ 30 ಲಕ್ಷ ವೆಚ್ಚದಲ್ಲಿ ಮುಖ್ಯರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ, 85 ಲಕ್ಷ ವೆಚ್ಚದಲ್ಲಿ ಮಠದಪಾಳ್ಯ ಗ್ರಾಮದ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ, ಹಲಸಬೆಲೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜೆ.ಪಿ.ಚಂದ್ರೇಗೌಡ, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಪೂಜಾರಿ ಪಾಳ್ಯ ಕೆ.ಕೃಷ್ಣಮೂರ್ತಿ, ಕೆಂಪಸಾಗರ ರಮೇಶ್, ದೋಣಕುಪ್ಪೆ ರಾಮಣ್ಣ, ಹಲಸಬೆಲೆ ಮಲ್ಲಿಕಾರ್ಜುನ್, ಧನಂಜಯ್ಯ, ಬಸಂತಿ, ಮಠದಪಾಳ್ಯ ಗೌಡ ಇತರರು ಭಾಗವಹಿಸಿದ್ದರು.