- ನಾಳೆ, ನಾಡಿದ್ದು ಎಲ್ಲರನ್ನೂ ಕರೆಸಿ ಮಾತಾಡುತ್ತೇವೆ: ಎಸ್.ಎಸ್.ಮಲ್ಲಿಕಾರ್ಜುನ । - ಇಂದು ಸಿಎಂ, ಡಿಸಿಎಂ ಜೊತೆಗೆ ಜಮೀರ್ ಸಹ ನಾಮಪತ್ರ ಸಲ್ಲಿಸಲು ಭಾಗಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಸಾದಿಕ್ ಪೈಲ್ವಾನ್ ಹೊಸಬರೇನೂ ಅಲ್ಲ. ನಮ್ಮವರೇ ಆಗಿದ್ದು, ಎಲ್ಲರ ಜೊತೆಗೂ ನಾಳೆ ಅಥವಾ ನಾಡಿದ್ದು ಮಾತನಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾದಿಕ್ ಪೈಲ್ವಾನರು ಈಗ ಸ್ವಲ್ಪ ಸಿಟ್ಟಿನಲ್ಲಿರುತ್ತಾರೆ. ನಾನು ಕರೆ ಮಾಡಿದೆನಾದರೂ ಕರೆ ಸ್ವೀಕರಿಸಲಿಲ್ಲ. ಸಾದಿಕ್ ಅವರ ತಮ್ಮ ಅಯೂಬ್ ನಮ್ಮ ಬ್ಲಾಕ್ ಅಧ್ಯಕ್ಷ. ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಎಲ್ಲವೂ ಸರಿಯಾಗಲಿದ್ದು, ಸಾದಿಕ್ ಜೊತೆಗೂ ಮಾತನಾಡುವೆ ಎಂದರು.
ಕಾಂಗ್ರೆಸ್‌ನಿಂದ ಈಗಾಗಲೇ ಬಿ ಫಾರಂ ಫೈನಲ್ ಆಗಿದ್ದು, ನಾಳೆ ಅಥವಾ ನಾಡಿದ್ದು ಎಲ್ಲರಿಗೂ ಕರೆಸಿ, ಮಾತನಾಡುತ್ತೇವೆ. ಎಲ್ಲವನ್ನೂ ಸರಿ ಮಾಡುತ್ತೇವೆ. ಎಐಸಿಸಿ, ಕೆಪಿಸಿಸಿಯಿಂದ ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರ ಸಮ್ಮುಖದಲ್ಲೇ ಆ ಮುಖಂಡರಿಗೆ ಜವಾಬ್ದಾರಿ ನೀಡಿದ್ದಾರೆ. ನಾವೆಲ್ಲರೂ ಸೇರಿಯೇ ಅಲ್ಪಸಂಖ್ಯಾತ ಮುಖಂಡರಿಗೆ ಜವಾಬ್ದಾರಿ ನೀಡಿದ್ದೇವೆ ಎಂದು ಹೇಳಿದರು.
ಕೇರಳದಲ್ಲೂ ಚುನಾವಣೆ ನಡೆಯುವ ಹಿನ್ನೆಲೆ ವಸತಿ ಸಚಿವ ಜಮೀರ್ ಅಹಮ್ಮದ್ ಅವರಿಗೆ ಅಲ್ಲಿಗೆ ಆಹ್ವಾನಿಸಿದ್ದಾರಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹಾಗೂ ಮಾ.23ರಂದು ನಾಮಪತ್ರ ಸಲ್ಲಿಸಲು ಬರುವಂತೆ ಸೂಚನೆ ನೀಡಿದ್ದಾರೆ. ನಾನೂ ಹೇಳಿದ್ದು, ನಾಮಪತ್ರ ಸಲ್ಲಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಜಮೀರ್ ಅಹಮ್ಮದ್, ಎಂ.ಬಿ.ಪಾಟೀಲ, ಸಂತೋಷ ಲಾಡ್ ಸೇರಿದಂತೆ ಅನೇಕ ಸಚಿವರು, ಮಾಜಿ ಸಚಿವರು, ಶಾಸಕರು, ಮುಖಂಡರು ಬರುತ್ತಾರೆ. ಎಲ್ಲರೂ ಸೇರಿಯೇ ನಾಮಪತ್ರ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮಾ.23ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆಗೆ ಬಂದು, ಸಮರ್ಥ ಜೊತೆಗೆ ನಾಮಪತ್ರ ಸಲ್ಲಿಸುವರು. ಅನಂತರ ಇಲ್ಲಿಂದ ಬಾಗಲಕೋಟೆಗೆ ತೆರಳಿ, ಉಮೇಶ ಮೇಟಿ ನಾಮಪತ್ರ ಸಲ್ಲಿಸುವಾಗ ಜೊತೆಗಿರುತ್ತಾರೆ. ಸೋಮವಾರವೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏಕಕಾಲಕ್ಕೆ ಪೂಜೆ ಇಟ್ಟುಕೊಂಡಿದ್ದಾರೆ. ಇದೇನೂ ಹೊಸದಂತೂ ಅಲ್ಲ. ಪೂಜೆ ಸಲ್ಲಿಸುವುದರೊಂದಿಗೆ ನಾಮಪತ್ರ ಸಲ್ಲಿಸುವ ಮೆರವಣಿಗೆ ಶುರುವಾಗುತ್ತದೆ. ಎರಡೂ ಪಕ್ಷಗಳ ಸಮಯವನ್ನು ಪೊಲೀಸರು ಮ್ಯಾನೇಜ್ ಮಾಡುತ್ತಾರೆ. ಯಾರಿಗಾದರೂ ಹಿಂದೆ, ಮುಂದೆ ಆಗುತ್ತದಷ್ಟೇ ಎಂದು ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಎಐಸಿಸಿಯಿಂದ ಬಂದ ಬಿ ಫಾರಂ ಸಮರ್ಥ ಶಾಮನೂರುಗೆ ನೀಡಿದ್ದಾರೆ. ನಾಮಪತ್ರ ಸಲ್ಲಿಸಿ, ಕಾಂಗ್ರೆಸ್ಸನ್ನು ಗೆಲ್ಲಿಸಲು ಸೂಚಿಸಿದ್ದಾರೆ. ನಾವೆಲ್ಲರೂ ಸಮಸ್ತ ಮತ್ತು ಉತ್ತರ- ದಕ್ಷಿಣ ಕ್ಷೇತ್ರಗಳ ಕಾಂಗ್ರೆಸ್ ಕುಟುಂಬದವರೆಲ್ಲಾ ಒಟ್ಟಾಗಿ ಹೆಚ್ಚಿನ ಕೆಲಸ ಮಾಡಿ, ಮತದಾರರ ಮನ ಗೆದ್ದು, ಸಮರ್ಥಗೆ ಗೆಲ್ಲಿಸುವ ಕೆಲಸವನ್ನು ಮಾಡುತ್ತೇವೆ. ಈ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.
- - -
- - -
-22ಕೆಡಿವಿಜಿ12: ದಾವಣಗೆರೆಯಲ್ಲಿ ಭಾನುವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾಧ್ಯಮಗಳೊಂದಿಗೆ ಮಾತನಾಡಿದರು. -22ಕೆಡಿವಿಜಿ13: ದಾವಣಗೆರೆಯ ತಮ್ಮ ನಿವಾಸದಲ್ಲಿ ಭಾನುವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಬಿಜೆಪಿ, ಆರೆಸ್ಸೆಸ್‌ನ ಮುಖಂಡರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.