ಕಾರ್ಯಕರ್ತರಿಗೆ ಬಿಜೆಪಿಯಲ್ಲಿರುವಷ್ಟು ಗೌರವ ಬೇರಲ್ಲೂ ಇಲ್ಲ

KannadaprabhaNewsNetwork |  
Published : Sep 01, 2024, 01:45 AM IST
ಗೋಕಾಕ: ಶಾಸಕ ಬಾಲಚಂದ್ರ ಜಾರಕಿಹೋಳಿ ಅವರು  ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರದಲ್ಲಿ ಸದಸ್ಯತ್ವ ಅಭಿಯಾನದ ಟೊಲ್ ಫ್ರೀ ಸಂಖ್ಯೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಬಿಜೆಪಿ ಮಂಡಲ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕನ್ನಡಪ್ರಭ ವಾರ್ತೆ ಗೋಕಾಕ

ಬಿಜೆಪಿ ಶಿಸ್ತಿನ ಪಕ್ಷ. ಕಾರ್ಯಕರ್ತರೆ ನಮಗೆ ಆಸ್ತಿ. ಇಲ್ಲಿ ಕಾರ್ಯಕರ್ತರಿಗಿರುವ ಗೌರವ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಇದರಿಂದಾಗಿಯೇ ಬಿಜೆಪಿ ಇಂದು ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಬೆಮ್ಯುಲ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಎನ್‌ಎಸ್‌ಎಫ್ ಕಾರ್ಯಾಲಯದ ಆವರಣದಲ್ಲಿ ಅರಬಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಮಂಡಲ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ್ ದಯಾಳ ಉಪಾಧ್ಯಾಯ ಅವರ ತ್ಯಾಗ ಮತ್ತು ಪರಿಶ್ರಮದಿಂದ ಬಿಜೆಪಿ ಇಷ್ಟೊಂದು ಬೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತ ಪ್ರಪಂಚದಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದರು.

ಸೆ.2ರಂದು ಪ್ರಧಾನಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಲಿದ್ದು, ಎರಡು ಹಂತಗಳಲ್ಲಿ ಈ ಅಭಿಯಾನ ಜರುಗಲಿದೆ. ಸೆ.2 ರಿಂದ 25ರತನಕ ಒಂದು ಹಂತವಾದರೆ, ಎರಡನೇ ಹಂತ ಅ.1 ರಿಂದ 15ರವರೆಗೆ ನಡೆಯಲಿದೆ. ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು. ಅಗತ್ಯಬಿದ್ದರೆ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಇದರ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು. ಅರಬಾವಿ ಕ್ಷೇತ್ರದಿಂದಲೇ ಕನಿಷ್ಠ 75 ಸಾವಿರ ಮತದಾರರನ್ನು ಸದಸ್ಯತ್ವದ ನೋಂದಣಿ ಮಾಡಿಸುವ ಮೂಲಕ ಮುಂಬರುವ ತಾಪಂ., ಜಿಪಂ, ಚುನಾವಣೆಯಲ್ಲಿ ನಮ್ಮವರು ಗೆಲ್ಲಲು ಈಗಿನಿಂದಲೇ ಪ್ರಯತ್ನ ಮಾಡುವಂತೆ ಕರೆ ನೀಡಿದರು.

ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿ:

ಮೂರು ಅವಧಿಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತ್ವತ್ವದ ಬಿಜೆಪಿ ಸರ್ಕಾರ ಮತ್ತು ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರ ಸರ್ಕಾರದ ಸಾಧನೆ ಜನರಿಗೆ ತಿಳಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿ, ನಮ್ಮ ಅರಬಾವಿ ಕ್ಷೇತ್ರದಿಂದಲೇ ಅತೀ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಮತ್ತೊಂದು ದಾಖಲೆ ಬರೆಯಲು ಅಗತ್ಯವಿರುವ ಸಿದ್ಧತೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಈಗಿರುವ ಕಾಂಗ್ರೆಸ್ ಸರ್ಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಯಾವ ಯೋಜನೆಗಳಿಗೂ ಅನುದಾನ ಕೊಡುತ್ತಿಲ್ಲ. ಎಲ್ಲವೂ ಗ್ಯಾರಂಟಿಗೆ ಹೋಗುತ್ತಿದೆ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿರುವುದಾಗಿ ಅವರು ಹೇಳಿದರು.

ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿದರು.ವೇದಿಕೆಯಲ್ಲಿ ಅರಬಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಭಾರಿ ದಾದಾಗೌಡ ಬಿರಾದಾರ, ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ಪ್ರಶಾಂತ ಅಮ್ಮಿನಭಾವಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.

-------

ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಈಗಿಂದಲೇ ಕಾರ್ಯಪ್ರವೃತ್ತರಾಗಬೇಕು. ಮುಂದಿನ ಅಕ್ಟೋಬರ್ ತಿಂಗಳಲ್ಲಿ ಚುನಾವಣೆಯ ಸಂಬಂಧ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗುವುದು. ಮುಂದಿನ ತಿಂಗಳಿನಿಂದ ನಡೆಯಲಿರುವ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಶ್ರಮಿಸಬೇಕು.

-ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಬಾವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!