ಕನ್ನಡಪ್ರಭ ವಾರ್ತೆ, ತುಮಕೂರುಅಧ್ಯಾಪಕನ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ವಯೋ ನಿವೃತ್ತಿಯ ನಂತರವೂ ಬೋಧನೆ ಮತ್ತು ಕಲಿಕೆಗೆ ಅವಕಾಶಗಳಿವೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಿರುವ ಡಾ.ಎಚ್.ಎಂ.ದಕ್ಷಿಣಮೂರ್ತಿ ರವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಜ್ಞಾನ ಗಂಗೆ ಬಿಡುಗಡೆ ಮಾಡಿ ಮಾತನಾಡಿದರು.ವಯೋ ನಿವೃತ್ತಿಯ ನಂತರವೂ ಬೋಧನೆಯನ್ನು ಮಾಡುತ್ತಾ, ಮತ್ತಷ್ಟು ಜ್ಞಾನಕ್ಕಾಗಿ ಪಿ.ಎಚ್.ಡಿ ಪಡೆದಂತಹ ಅನೇಕ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಭಾರತದಂತಹ ಬಹುತ್ವದ ನಾಡಿನಲ್ಲಿ ಸಂಬಂಧಗಳಿಗೆ ಹೆಚ್ಚಿನ ಬೆಲೆ ಇದೆ. ಸಂಬಂಧಗಳಲ್ಲಿ ಮಾನವೀಯತೆ, ಅಂತಃಕರಣ, ಪ್ರೀತಿ, ಕರುಣೆ,ನನ್ನ ಊರು, ನನ್ನ ಜಿಲ್ಲೆ ಎಂಬ ಅಭಿಮಾನ ಬೆಳೆಯಲು ಸಾಧ್ಯವಾಗುತ್ತದೆ.ನನ್ನಿಂದ ಪಿಎಚ್.ಡಿ ಮಾರ್ಗದರ್ಶನ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ತುಮಕೂರು ಜಿಲ್ಲೆಯವರೇ ಹೆಚ್ಚು ಎಂದರು.
ಕುಣಿಗಲ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ನರಸಿಂಹನ್ ಮಾತನಾಡಿ, ದಕ್ಷಿಣ ಮೂರ್ತಿ ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಕೆಲಸ ಮಾಡಿದವರು. ಮೌಲ್ಯ ಮಾಪನದ ಸಂದರ್ಭದಲ್ಲಿ ಪ್ರತಿ ಉತ್ತರ ಪತ್ರಿಕೆಯ ಹಿಂದೆ ಓರ್ವ ವಿದ್ಯಾರ್ಥಿಯ ಭವಿಷ್ಯವಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಅಂಕಗಳನ್ನು ನೀಡುವಂತೆ ನಮಗೆ ಸಲಹೆ ನೀಡುತಿದ್ದ ಮಾತೃ ಹೃದಯಿ ಎಂದರು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಕ್ಷಿಣಮೂರ್ತಿ, 1989ರಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪೂರೈಸಿ, ಸಿದ್ಧಗಂಗಾ ಶ್ರೀಗಳ ಆಶೀರ್ವಾದದೊಂದಿಗೆ ನೆಲಮಂಗಲದ ಶ್ರೀಸಿದ್ಧಗಂಗಾ ಪದವಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಜೀವನ ಆರಂಭಿಸಿ, 37 ವರ್ಷಗಳ ಕಾಲ ಬೋಧಕನಾಗಿ ಕೆಲಸ ಮಾಡಿದ್ದು, ವೃತ್ತಿ ಜೀವನ ತೃಪ್ತಿ ತಂದಿದೆ.1 996ರಲ್ಲಿ ತುಮಕೂರಿನ ಮಹಿಳಾ ಪದವಿ ಕಾಲೇಜಿಗೆ ವರ್ಗಾವಣೆಗೊಂಡು, ಅಂದಿನಿಂದ ಇಂದಿನವರೆಗೆ ಇಲ್ಲಿಯೇ ಕೆಲಸ ಮಾಡಿದ್ದೇನೆ. ನನ್ನ ಎಲ್ಲಾ ಅಧ್ಯಾಪಕ ಮಿತ್ರರು, ಬೋಧಕೇತರ ಸಿಬ್ಬಂದಿ ಸಹಕಾರ ನೀಡಿದ್ದಾರೆ. 2023ರಲ್ಲಿ ಪ್ರಾಂಶುಪಾಲನಾಗಿ ಜವಾಬ್ದಾರಿ ತೆಗೆದುಕೊಂಡ ನಂತರ ನ್ಯಾಕ್ ಕಮಿಟಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ, ನಮ್ಮ ಕಾಲೇಜಿಗೆ ಬಿ ಪ್ಲಸ್ ಗ್ರೆಡ್ ಪಡೆದುಕೊಂಡಿದೆ. ಕಾಲೇಜನ್ನು ಬೌದ್ಧಿಕವಾಗಿ ಅಭಿವೃದ್ಧಿಪಡಿಸಲು ಸಹಕಾರ ನೀಡಿದ ಗುರುವೃಂದಕ್ಕೆ, ಆಡಳಿತ ಮಂಡಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಪಿ.ನಾಗರಾಜು ಮಾತನಾಡಿದರು. ಶ್ರೀ ಸಿದ್ಧಗಂಗಾ ಪದವಿ ಕಾಲೇಜುಗಳ ಸಂಯೋಜಕರಾದ ಡಾ.ಡಿ.ಎನ್. ಯೋಗೀಶ್ವರಪ್ಪ, ಉಷಾಮೂರ್ತಿ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.