ಹುಚ್ಚವ್ವನಹಳ್ಳಿ ರುದ್ರಭೂಮಿಗೆ ಶವ ಸಾಗಿಸಲು ರಸ್ತೆಯೇ ಇಲ್ಲ

KannadaprabhaNewsNetwork | Published : May 26, 2024 1:34 AM

ಸಾರಾಂಶ

ತಾಲೂಕಿನ ಹುಚ್ಚವ್ವನಹಳ್ಳಿಯಲ್ಲಿ ಶವಸಂಸ್ಕಾರಕ್ಕೆ ಮೃತದೇಹವನ್ನು ರಸ್ತೆ, ಸೇತುವೆ ಇಲ್ಲದ್ದರಿಂದ ಕಾಲುವೆ ದಾಟಿ ರುದ್ರಭೂಮಿಗೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾವಾಗಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಹುಚ್ಚವ್ವನಹಳ್ಳಿಯಲ್ಲಿ ಯಾರಾದರೂ ಮರಣ ಹೊಂದಿದಾಗ ರುದ್ರಭೂಮಿ ತಲುಪಲು ಹರಸಾಹಸ ಪಡುವಂತಾಗಿದೆ. ಮೃತದೇಹ ಹೊತ್ತು ಕಾಲುವೆ ಇಳಿದು ಹತ್ತುವ ಪರಿಸ್ಥಿತಿ ಇದ್ದು ಅದರಲ್ಲೂ ಮಳೆ ಬಂದು ಕಾಲುವೆಯಲ್ಲಿ ನೀರು ಹರಿಯುವಾಗಂತೂ ಮೃತದೇಹ ದಡ ಮುಟ್ಟಿಸುವುದೇ ದೊಡ್ಡ ತ್ರಾಸದ ಕೆಲಸವಾಗಿದೆ. ಶುಕ್ರವಾರ ಅಪಘಾತದಲ್ಲಿ ಮೃತಪಟ್ಟ ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಮೃತ ದೇಹವನ್ನು ಕಾಲುವೆಯ ನೀರಲ್ಲಿ ಹೊತ್ತು ಸಾಗಿಸಿದ್ದು, ಮತ್ತು ಆ ವೇಳೆ ಅಲ್ಲಿನ ಒಬ್ಬರ ಕೈ ಮುರಿದದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮೃತದೇಹ ಸಾಗಿಸುವಾಗ ಸಿದ್ದೇಶ್ ಎನ್ನುವವರ ಕೈ ಮುರಿದಿದ್ದು ಮಳೆಗಾಲದಲ್ಲಿ, ಕಾಲುವೆಯಲ್ಲಿ ನೀರು ಹರಿಯು ವಾಗ ಶವಸಂಸ್ಕಾರ ಮಾಡುವುದೇ ಕಷ್ಟದ ಕೆಲಸ ಎಂಬಂತಾಗಿದೆ. 2022 ನವೆಂಬರ್ 2 ರಂದು ಈ ಗ್ರಾಮದವರಿಗೆಂದೇ ಸ.ನಂ.22ರಲ್ಲಿ 1 ಎಕರೆ 20 ಗುಂಟೆ ಜಮೀನನ್ನು ರುದ್ರಭೂಮಿಗೆಂದು ಮಂಜೂರು ಮಾಡಲಾಗಿದೆ. ಕುಂಚಿಟಿಗ ಜನಾಂಗದ ಅಭಿವೃದ್ಧಿಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 3 ಎಕರೆ ಮಂಜೂರು ಮಾಡಿದ್ದು, ಸರ್ಕಾರಿ ಗೋಮಾಳದ ಉಳಿದ ಜಮೀನನ್ನು ಹದ್ದುಬಸ್ತು ಮಾಡಿಕೊಡಿ ಎಂದು ಗ್ರಾಮಸ್ಥರು ಮಾಡಿದ ಮನವಿಯನ್ನು ಇದುವರೆಗೂ ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ವಿವಿ ಸಾಗರದ ನೀರು ಬಿಟ್ಟಾಗ ಮತ್ತು ಮಳೆ ಬಂದು ಕಾಲುವೆ ಹರಿಯುವಾಗ ಪ್ರಯಾಸ ಪಡುವ ಗ್ರಾಮಸ್ಥರು ರುದ್ರಭೂಮಿ ತಲುಪಲು ಸೇತುವೆ ಇಲ್ಲವೇ ರಸ್ತೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಉಗ್ರ ಹೋರಾಟದ ಎಚ್ಚರಿಕೆ: ಕಳೆದ ಮೂರು ವರ್ಷದಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಇದುವರೆಗೂ ಸೇತುವೆಯಾಗಲಿ ರಸ್ತೆಯನ್ನಾಗಲಿ ಮಾಡಿಲ್ಲ. 8-10 ತಿಂಗಳ ಹಿಂದೆ ಗೋಮಾಳ ಜಾಗವನ್ನು ಹದ್ದುಬಸ್ತು ಮಾಡಲು ಗ್ರಾಮಸ್ಥರು ಮನವಿ ಸಲ್ಲಿಸಿದ್ದೆವು. ಆ ಬಗ್ಗೆಯೂ ನಿರ್ಲಕ್ಷ್ಯ ವಹಿಸಲಾಗಿದೆ. ಹಳ್ಳದಲ್ಲಿ ಇಳಿದು ಶವ ಆ ಕಡೆ ಸಾಗಿಸುವಾಗ ಒಬ್ಬರ ಕೈ ಮುರಿದಿದೆ. ಇದಕ್ಕೆಲ್ಲಾ ಯಾರು ಹೊಣೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹುಚ್ಚವ್ವನಹಳ್ಳಿ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ಎಚ್ಚರಿಕೆ ನೀಡಿದರು.

Share this article