ದೇಶದ ಜನರಲ್ಲಿ ಪ್ರಾದೇಶಿಕತೆ ಭಾವನೆ ಸಲ್ಲದು

KannadaprabhaNewsNetwork | Published : Oct 21, 2024 12:41 AM

ಸಾರಾಂಶ

ದೇಶದ ಜನರಲ್ಲಿ ಪ್ರಾದೇಶಿಕತೆ ಭಾವನೆ ಬರಬಾರದು. ಎಲ್ಲ ಭಾಷೆಗಳು ಒಂದೇ. ಬೇರೆ ಭಾಷಿಕರ ಬಗ್ಗೆ ಪರಸ್ಪರ ಸಹಾನುಭೂತಿ ಇರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಬೌದ್ಧಿಕ ಪ್ರಮುಖ್ ಕೃಷ್ಣಪ್ರಸಾದ್ ಬದಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಆರ್‌ಎಸ್‌ಎಸ್‌ ಪ್ರಾಂತ್ಯ ಬೌದ್ಧಿಕ ಪ್ರಮುಖ್ ಕೃಷ್ಣಪ್ರಸಾದ್ ಬದಿ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಜನರಲ್ಲಿ ಪ್ರಾದೇಶಿಕತೆ ಭಾವನೆ ಬರಬಾರದು. ಎಲ್ಲ ಭಾಷೆಗಳು ಒಂದೇ. ಬೇರೆ ಭಾಷಿಕರ ಬಗ್ಗೆ ಪರಸ್ಪರ ಸಹಾನುಭೂತಿ ಇರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಬೌದ್ಧಿಕ ಪ್ರಮುಖ್ ಕೃಷ್ಣಪ್ರಸಾದ್ ಬದಿ ಹೇಳಿದರು.

ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಪಥ ಸಂಚಲನ ನಂತರ ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ರಾಜ್ಯಗಳು ಭಾರತ ಮಾತೆಯ ಸಂಜಾತೆಯರು. ಆದರೆ ವಿರೋಧಿಗಳು ಸಮಾಜದಲ್ಲಿ ದ್ವೇಷಭಾವನೆ ಬಿತ್ತುತ್ತಿದ್ದಾರೆ. ಆದರೆ ಸಂಘವು ದೇಶ ಮೊದಲು ಎಂಬ ದೃಷ್ಟಿಕೋನದೊಂದಿಗೆ ಶತಾಬ್ದಿ ವರ್ಷಕ್ಕೆ ಮುನ್ನಡೆಯುತ್ತಿದೆ. ಪ್ರಾಂತ್ಯ, ಭಾಷೆಯ ಭೇದ-ಭಾವ ತೊರೆದು ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯಿಂದ ದೇಶವನ್ನು ವಿಶ್ವಗುರುವಾಗಿಸಲು ಕೆಲಸ ಮಾಡಬೇಕಿದೆ ಎಂದರು.

ಜಯದೇವ ಪ್ರೆಸ್ ಮಾಲೀಕ ಕಣಕುಪ್ಪೆ ಮುರುಗೇಶಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ಬಸವಾದಿ ಶರಣರ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ. ವಚನಗಳ ಮೂಲಕ ಸಾಮಾಜಿಕ ಸಾಮರಸ್ಯ, ಅಸ್ಪೃಶ್ಯತೆ ನಿವಾರಣೆಗೆ ಶರಣರು ಪ್ರಯತ್ನಿಸಿದರು ಎಂದು ತಿಳಿಸಿದರು.

ಬಹಿರಂಗ ಕಾರ್ಯಕ್ರಮಕ್ಕೂ ಮುನ್ನ ಶಿಸ್ತಿನ ಪಥಸಂಚಲನವು ಇಲ್ಲಿನ ಜಯದೇವ ವೃತ್ತದಿಂದ ಪ್ರಾರಂಭವಾಗಿ ಕೆ.ಬಿ. ಬಡಾವಣೆ, ಭಗತ್ ಸಿಂಗ್ ನಗರ, ಕೆಟಿಜೆ ನಗರ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಹೈಸ್ಕೂಲ್ ಮೈದಾನ ತಲುಪಿತು. ದಾರಿ ಉದ್ದಕ್ಕೂ ಸ್ವಯಂ ಸೇವಕರಿಗೆ ಸಾರ್ವಜನಿಕರು ಪುಷ್ಪವೃಷ್ಠಿ ಮಾಡಿದರು.

ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಟಿ.ಎಸ್. ಜಯರುದ್ರೇಶ ಹಾಗೂ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

- - - -19ಕೆಡಿವಿಜಿ39, 40ಃ:

ದಾವಣಗೆರೆಯಲ್ಲಿ ಶನಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.

Share this article