ಮಂಗಳೂರು : ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಈಗಲೂ ಬದ್ಧ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯಾವ ಕ್ರಾಂತಿಯೂ ಇಲ್ಲ, ಎಲ್ಲ ಸರಿಯಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹೇಳಿಕೆಗೆ ರಾಜಣ್ಣ ಅವರೇ ಉತ್ತರ ಕೊಡಬೇಕು. ನಾವು ಇದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ನಮ್ಮ ಪ್ರಕಾರ ಎಲ್ಲವೂ ಸರಿಯಾಗಿಯೇ ಇದೆ. ಎಲ್ಲರೂ ಒಟ್ಟಿಗೆ ಇದ್ದೇವೆ ಎಂದರು.
ಅಧಿಕಾರಿಗಳ ಸಭೆ ನಡೆಸಿಲ್ಲ:
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಅಧಿಕಾರಿಗಳ ಸಭೆ ನಡೆಸಿರುವುದಾಗಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸುರ್ಜೇವಾಲಾ ಅವರು ಯಾವ ಅಧಿಕಾರಿಗಳನ್ನು ಕರೆದು ಸಭೆ ಮಾಡಿದ್ದಾರೆ? ನನಗಂತೂ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಶಾಸಕರು, ನಮ್ಮನ್ನೆಲ್ಲಾ ಕರೆದಿದ್ದರು. ಪಕ್ಷದ ನಾಯಕರನ್ನು ಕರೆದಿದಿದ್ದರು. ಆದರೆ ಅಧಿಕಾರಿಗಳನ್ನು ಕರೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಶೀಘ್ರ ರಾಹುಲ್ ಗಾಂಧಿ ಮಾಹಿತಿ ಬಹಿರಂಗ:
ಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಚುನಾವಣಾ ಆಯೋಗದ ದುರುಪಯೋಗ ಮಾಡಿರುವ ಕುರಿತು ರಾಹುಲ್ ಗಾಂಧಿ ಸಾಕಷ್ಟು ಮಾಹಿತಿ ಸಂಗ್ರಹ ಮಾಡಿದ್ದಾರೆ. ಆಯೋಗದವರು ಮಹಾರಾಷ್ಟ್ರ, ಬಿಹಾರದಲ್ಲಿ ಯಾವ ರೀತಿ ಮಾಡಿದ್ದಾರೆ. ಕರ್ನಾಟಕದಲ್ಲಿ ಏನೇನು ಮಾಡಿದ್ದಾರೆ ಎಂಬ ಮಾಹಿತಿ ರಾಹುಲ್ ಗಾಂಧಿ ಬಳಿ ಇದೆ. ಸದ್ಯದಲ್ಲೇ ಆ ಮಾಹಿತಿಯನ್ನು ಪ್ರಸ್ತಾಪ ಮಾಡುತ್ತಾರೆ ಎಂದರು.
ಚುನಾವಣಾ ಆಯೋಗದ ಬಗ್ಗೆ ನಂಬಿಕೆ ಕಡಿಮೆ ಆಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಇರಬೇಕಾಗಿತ್ತು. ಆದರೆ ಅವರ ನಡವಳಿಕೆ, ಮಾತುಗಳು, ನಿರ್ವಹಣೆ ನೋಡಿದಾಗ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಇದು ನಿಜಕ್ಕೂ ಗಂಡಾಂತರ ಎಂದರು.
ಸುಪ್ರೀಂ ಕೋರ್ಟ್ ಇ.ಡಿ.ಗೆ ಏನು ಹೇಳಿದೆ ಎಂದು ಎಲ್ಲರಿಗೂ ಗೊತ್ತಿದೆ. ಇದಕ್ಕಿಂತ ಬೇರೆ ಉದಾಹರಣೆ ಏನು ಬೇಕು? ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗ ಎಲ್ಲ ಇಲಾಖೆಗಳು ಹೊಂದಾಣಿಕೆ ಮಾಡಿಕೊಂಡಿವೆ. ದೇಶ ಸರ್ವಾಧಿಕಾರದ ಅಡಿ ಬಂದು 11 ವರ್ಷಗಳಾದವು. ವಿರೋಧ ಪಕ್ಷಗಳನ್ನು ಮುಗಿಸಬೇಕು ಎಂಬ ಉದ್ದೇಶದಿಂದ ಯಾರೂ ಧ್ವನಿ ಎತ್ತದ ರೀತಿ ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.