ಕನ್ನಡಪ್ರಭ ವಾರ್ತೆ ತುಮಕೂರುಇಂದು ದೇಶದಲ್ಲಿ ವಿದ್ಯಾವಂತರ ಕೊರತೆಯಿಲ್ಲ. ಆದರೆ ಬುದ್ದಿವಂತರ ಕೊರತೆಯಿದೆ.ಅಂಕಗಳ ಹಿಂದೆ ಬಿದ್ದು, ಮಾನಸಿಕ ಮತ್ತು ದೈಹಿಕ ನ್ಯೂನತೆಯನ್ನು ಅನುಭವಿಸುತಿದ್ದಾರೆ ಎಂದು ಸ್ಫೂರ್ತಿ ಚಿದಾನಂದ ತಿಳಿಸಿದ್ದಾರೆ.ನಗರದ ಅಶೋಕ ರಸ್ತೆಯಲ್ಲಿರುವ ಅನನ್ಯ ಪದವಿಪೂರ್ವ ಕಾಲೇಜು ಆವರಣದಲ್ಲಿ ೧೧ ಮೈಲ್ ಥಿಯೇಟರ್ ಅವರು ಅನನ್ಯ ಪಿ.ಯು ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 30 ದಿನಗಳ ಬೇಸಿಗೆ ಶಿಬಿರ ಆಡು ಬಾ ನನ ಕಂದ ಕಾರ್ಯಕ್ರಮಕ್ಕೆ ಮಕ್ಕಳಿಗೆ ಬಣ್ಣ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಓದಿ ರ್ಯಾಂ ಕ್ ಪಡೆದವನಿಗಿಂತ, ಸಮಸ್ಯೆಯನ್ನು ಬಗೆಹರಿಸಲು ವಿಭಿನ್ನವಾಗಿ ಯೋಚಿಸುವ ವ್ಯಕ್ತಿಗೆ ಹೆಚ್ಚು ಮಾನ್ಯತೆ ಇದೆ. ಶಾಲಾ ಪಠ್ಯದ ಜೊತೆಗೆ, ಚತುರತೆಯನ್ನು ಬೆಳೆಸಿಕೊಂಡರೇ ಹೆಚ್ಚು ಜನಮಾನಸದಲ್ಲಿ ಉಳಿಯುಬಹುದು. ಇವುಗಳನ್ನು ಇಂತಹ ಬೇಸಿಗೆ ಶಿಬಿರಗಳು ಕಲಿಸುತ್ತವೆ.ಪಠ್ಯದ ಜೊತೆಗೆ,ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸಿಕೊಳ್ಳಲು ಪ್ರೇರೆಪಿಸಬೇಕೆಂದರು.ಲೇಖಕ ಹಾಗೂ ರಂಗ ನಿರ್ದೇಶಕ ಹೊನ್ನವಳ್ಳಿ ನಟರಾಜು ಮಾತನಾಡಿ,ಇಂದಿನ ಧಾವಂತದ ಜೀವನದಲ್ಲಿ ಮಕ್ಕಳ ಮನಸ್ಸಿಗೆ ಒಂದಿಷ್ಟು ಮನರಂಜನೆ ನೀಡಿ, ಅವರು ಬೌದ್ದಿಕವಾಗಿ ವಿಕಾಸ ಹೊಂದಲು ಇಂತಹ ಬೇಸಿಗೆ ಶಿಬಿರಗಳ ಸಹಕಾರಿಯಾಗಲಿವೆ ಎಂದು ಹಿರಿಯ ರಂಗನಿರ್ದೇಶಕ ಹಾಗೂ ಲೇಖಕ ನಟರಾಜ ಹೊನ್ನವಳ್ಳಿ ಅವರು ಅಭಿಪ್ರಾಯಪಟ್ಟಿದ್ದಾರೆ.ಅಂಕ ಗಳಿಕೆಯ ದಾವಂತದಲ್ಲಿ ಮಕ್ಕಳ ಸೃಜನಶೀಲ ಅಭಿವ್ಯಕ್ತಿಯೇ ಮಯಾವಾಗು ತ್ತಿರುವ ಕಾಲಘಟ್ಟದಲ್ಲಿ ಕಲೆ, ಸಾಹಿತ್ಯ, ನಾಟಕಗಳ ಮೂಲಕ ಹೊಸತೊಂದನ್ನು ಕಲಿಯುವ ಪ್ರಯತ್ನ ಇದಾಗಿದೆ ಎಂದರು.ಪೋಷಕರು ಮಕ್ಕಳನ್ನು ಸಂಪಾದನೆಯ ಮೂಲವಾಗಿಸಲು ಹೊರಟಿದ್ದಾರೆ. ಚೆನ್ನಾಗಿ ಓದು, ಒಳ್ಳೆಯ ಅಂಕ ಪಡೆ, ಉದ್ಯೋಗಗಳಿಸು, ಇವಿಷ್ಟೇ ಬದುಕು ಎನ್ನುವಂತಹ ಸ್ಥಿತಿ ಇದೆ. ಇದು ಬದಲಾಗಬೇಕು. ಮಕ್ಕಳು ಸ್ಪರ್ಧಾತ್ಮಕ ಜಗತ್ತಿನ ಎಲ್ಲಾ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಲೋಕಜ್ಞಾನವನ್ನು ಪಡೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕು.ಆಗ ಮಾತ್ರ ಬದುಕಿನ ಸೋಲನ್ನು ಎದುರಿಸಲಾಗದೆ ಮಾಡಿಕೊಳ್ಳುವ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕಲಾವಿದ ಹೇಮಂತ್.ವೈ.ಎಂ. ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ನಟರಾಜು ಹೊನ್ನವಳ್ಳಿ ಅವರು ಶುಭ ಹಾರೈಸಿದರು.ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ,ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ವೇದಿಕೆಗಳಾಗಿವೆ. ಸಮಾಜದೊಂದಿಗೆ ಬೆರೆಯುವುದು, ಸ್ನೇಹಿತರ ಒಡನಾಟ, ಹಾಸ್ಯ, ಹರಟೆ ಎಲ್ಲವೂ ಮಕ್ಕಳ ಮನಸ್ಸನ್ನು ಮುದಗೊಳಿಸುತ್ತವೆ. ರಂಗಭೂಮಿಯಿಂದ ನಾವು ಶಿಸ್ತು ಮತ್ತು ಬದುಕಿನ ಪಾಠ ಕಲಿತಿದ್ದೇವೆ.ನೀವು ಕೂಡ ಇಂತಹ ಪಾಠ ಕಲಿಯುವಂತಾಗಲಿ ಎಂದು ಶುಭ ಹಾರೈಸಿದರು. ಕಲಾವಿದರಾದ ವಿರೇಶ ಪ್ರಸಾದ್,ಗ್ರಾ.ಪಂ.ಸದಸ್ಯ ತಿಲಕ್, ಸಿನಿಮಾ ನಟ ಯಶುರಾಜ್, ಜಿಲ್ಲಾ ಬ್ರಾಹ್ಮಣ ಸಭಾ ಜಿಲ್ಲಾಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಶಿಬಿರದ ನಿರ್ದೇಶಕ ಹೇಮಂತ್.ವೈ.ಎಂ. ಮತ್ತಿತರರು ಪಾಲ್ಗೊಂಡಿದ್ದರು.