ಯಲ್ಲಾಪುರ: ಬುಡಕಟ್ಟು ಮತ್ತು ಹಿಂದುಳಿದ ಜನಾಂಗಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಮಂಜೂರಿ ಮಾಡಿದರೂ ಅವುಗಳ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗಿ ಫಲಾನುಭವಿಗಳು ವಂಚಿತರಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಾಸ್ತವಿಕವೆಂದರೆ ಎಸ್‌ಸಿ/ಎಸ್‌ಟಿಗಳಿಗೆ ಯಾವುದೇ ಅನುದಾನದ ಕೊರತೆ ಖಂಡಿತ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.ನ. ೭ರಂದು ಪಟ್ಟಣದ ಅಡಿಕೆ ಭವನದಲ್ಲಿ ಶಿರಸಿಯ ಗ್ರೀನ್ ಕೇರ್ ಸಂಸ್ಥೆ ಮತ್ತು ಕ್ರಿಯೇಟಿವ್ ತರಬೇತಿ ಕೇಂದ್ರದ ಸಹಯೋಗದಲ್ಲಿ ಕೌಶಲ್ಯ ವಿಕಾಸ ಯೋಜನೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬ್ಯೂಟಿಶಿಯನ್ ಮತ್ತು ಬೇಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿಯ ೨ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, ಬ್ಯೂಟಿಶಿಯನ್ ಮತ್ತು ಬೇಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿಯ ೩ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ನೀಡಲಾಗುವ ತರಬೇತಿ ಉದ್ಘಾಟಿಸಿ ಮಾತನಾಡಿದರು.ಪೂರ್ಣಪ್ರಮಾಣದ ರಾಜಕಾರಣಿಗಳಲ್ಲದ ನನ್ನಂತಹ ವ್ಯಕ್ತಿಗಳಿಗೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವೇಳೆ ಸಿಗುವುದು ಅಪರೂಪ. ಅಲ್ಲದೇ, ಕೇವಲ ಸಿದ್ದಿ ಜನಾಂಗದ ಅಭಿವೃದ್ಧಿಗೆ ಸೀಮಿತವಾಗಿರುವ ಶಾಸಕನೂ ನಾನಲ್ಲ ಎಂದ ಅವರು, ಶಾಸಕನಾಗಿ ವನವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಆದ್ಯತೆ ನೀಡುವುದು ಉದ್ದೇಶವಾಗಿದೆ ಎಂದರು.
ಪಟ್ಟಣದ ಸ.ಪ್ರ.ದ. ಕಾಲೇಜು ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಮಾತನಾಡಿ, ಕಾಲಕ್ಕೆ ತಕ್ಕ ಬದಲಾವಣೆ ಮತ್ತು ಅನಿವಾರ್ಯವೂ ಆಗಿದ್ದು, ಕೌಶಲ್ಯಪೂರಿತ ಉದ್ಯಮ ಯಶಸ್ಸು ಗಳಿಸಬಹುದು. ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಪದವಿ ನೀಡುತ್ತವೆಯಾದರೂ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ನೀಡಲಾರವು. ಈ ಹಿನ್ನೆಲೆ ಗ್ರೀನ್ ಕೇರ್ ಸಂಸ್ಥೆ ನೀಡಿದ ಉದ್ಯೋಗಾವಕಾಶವನ್ನು ಪ್ರೀತಿಸಿ, ಇಚ್ಛಾಶಕ್ತಿ ಮತ್ತು ಬದ್ಧತೆಗಳಿಂದ ಬಳಸಿಕೊಳ್ಳಿ ಎಂದರು. ತಾಪಂ ಮಾಜಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಮಾತನಾಡಿ, ಇಂದಿನ ದಿನಮಾನದಲ್ಲಿ ಇಂತಹ ವೃತ್ತಿಪದ ಕೋರ್ಸ್‌ಗಳಿಗೆ ಅತ್ಯಂತ ಮಹತ್ವವಿದೆ. ನೀವು ತಯಾರಿಸುವ ಉಡುಗೆ- ತೊಡುಗೆಗಳು ಬೇರೆಯವರಿಗೆ ಮುಜುಗರವನ್ನು ಉಂಟುಮಾಡುವಂತಿರಬಾರದು. ಮುಖ್ಯವಾಗಿ ಉಡುಗೆ- ತೊಡುಗೆಗಳನ್ನು ಧರಿಸುವ ವ್ಯಕ್ತಿಗಳನ್ನು ನೋಡುವವರ ಮನಃಸ್ಥಿತಿಯೂ ಬದಲಾಗಬೇಕು ಎಂದರು.ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಕಣಗಿಲ್ ಮಾತನಾಡಿ, ಸ್ವಾವಲಂಬಿ ಬದುಕಿಗೆ ಪೂರಕ ಅನುಕೂಲ ಕಲ್ಪಿಸಿದ ಗ್ರೀನ್ ಕೇರ್ ಸಂಸ್ಥೆಯ ತರಬೇತಿ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ವಿಫುಲ ಅವಕಾಶಗಳಿರುವ ಈ ಕ್ಷೇತ್ರ ಸದ್ಬಳಕೆಯಾಗಲಿ ಎಂದು ಆಶಿಸಿದರು.ಶಿರಸಿಯ ಅಸ್ಮಿತೆ ಫೌಂಡೇಶನ್ನಿನ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್, ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಕೇರ್ ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ ಮುಳೆ ಸಾಂದರ್ಭಿಕ ಮಾತನಾಡಿದರು. ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕ ಗಜಾನನ ಭಟ್ಟ ವೇದಿಕೆಯಲ್ಲಿದ್ದರು. ಸೌಮ್ಯಾ, ಸ್ವಾತಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯಲ್ಲಾಪುರದ ಕ್ರಿಯೇಟೀವ್ ತರಬೇತಿ ಕೇಂದ್ರದ ಮುಖ್ಯಸ್ಥ ಶ್ರೀನಿವಾಸ ಮುರ್ಡೇಶ್ವರ ಸ್ವಾಗತಿಸಿದರು.ಗ್ರೀನ್ ಕೇರ್ ಪ್ರಧಾನ ಕಾರ್ಯದರ್ಶಿ ಜಿತೇಂದ್ರಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಡಿಸೋಜಾ ನಿರ್ವಹಿಸಿದರು. ಆಫ್ಸಾನಾ ವಂದಿಸಿದರು. ೪೫ ದಿನಗಳ ಕೋರ್ಸ್‌ನಲ್ಲಿ ತರಬೇತಿ ಪಡೆದ ೪೦ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅಲ್ಲದೇ, ೩ನೇ ಬ್ಯಾಚಿನ ೪೦ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು. ಶಿಬಿರದಲ್ಲಿ ತರಬೇತಿ ಪಡೆದ ಸಾವಿತ್ರಿ ಮತ್ತು ಮಧು ನಾಲ್ಕರ್ ಅನಿಸಿಕೆ ವ್ಯಕ್ತಪಡಿಸಿದರು.