ಪ್ರಾಕೃತಿಕ ನಿರ್ವಹಣೆಗೆ ಹಣ ಕೊರತೆ ಇಲ್ಲ: ಸಚಿವ ಭೋಸರಾಜು

KannadaprabhaNewsNetwork |  
Published : Jul 22, 2024, 01:23 AM IST
ಚಿತ್ರ :  21ಎಂಡಿಕೆ1 : ಮಳೆ ಹಾನಿ ಪ್ರದೇಶಕ್ಕೆ ಉಸ್ತುವಾರಿ ಸಚಿವ ಭೋಸರಾಜು ಭೇಟಿ ನೀಡಿ ಪರಿಶೀಲಿಸಿದರು.  | Kannada Prabha

ಸಾರಾಂಶ

ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಬಳಿ ಈಗಾಗಲೇ 30 ಕೋಟಿ ರು. ಇದೆ. ಪ್ರಾಕೃತಿಕ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ/ಸೋಮವಾರಪೇಟೆ

ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಬಳಿ ಈಗಾಗಲೇ 30 ಕೋಟಿ ರು. ಇದ್ದು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜು ಹೇಳಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಸಚಿವ ಎನ್.ಎಸ್. ಭೋಸರಾಜು, ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ವೀಕ್ಷಿಸಿದರು. ಮುಕ್ಕೊಡ್ಲು, ಐಗೂರು, ಮಲ್ಲಳ್ಳಿ ಜಲಪಾತ ಬಳಿ ಸೇತುವೆ ಹೀಗೆ ಮಳೆಹಾನಿ ಪ್ರದೇಶ ಹಾಗೂ ಮಾದಾಪುರ ಬಳಿಯ ಜಂಬೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕುಂದುಕೊರತೆ ಆಲಿಸಿದರು.

ಬಳಿಕ ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಮನೆ, ರಸ್ತೆ, ಸೇತುವೆ, ತಡೆಗೋಡೆ, ವಿದ್ಯುತ್ ಕಂಬ ಹಾಗೂ ಪರಿವರ್ತಕಗಳು, ಬೆಳೆ ಹಾನಿ ಹೀಗೆ ಮಳೆಯಿಂದ ವಿವಿಧ ರೀತಿಯ ಹಾನಿಯಾಗಿದ್ದು, ಈ ಸಂಬಂಧ ನಷ್ಟದ ಅಂದಾಜು ಮಾಡಿ ಮುಖ್ಯಮಂತ್ರಿ ಅವರು ಹಾಗೂ ಕಂದಾಯ ಸಚಿವರಿಗೆ ವರದಿ ನೀಡಿ, ವಿಶೇಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಬಳಿ ಈಗಾಗಲೇ 30 ಕೋಟಿ ರೂ ಇದ್ದು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದರು.

ಮನೆ ಹಾನಿ ಸಂಬಂಧ ಎನ್‌ಡಿಆರ್‌ಎಫ್‌ ನಿರ್ದೇಶನದಂತೆ ಕ್ರಮವಹಿಸಲಾಗುವುದು. ಸಂತ್ರಸ್ತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗುವುದು ಎಂದು ಭೋಸರಾಜು ತಿಳಿಸಿದರು.

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಆಗಬೇಕಿರುವ ಕೆಲಸಗಳನ್ನು ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು. ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ಜಂಬೂರು ಗ್ರಾಮದಲ್ಲಿ ಅಗತ್ಯ ಮೂಲ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಸರ್ಕಾರ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಇನ್ನೂ 200 ಕೋಟಿ ರು.ಬಿಡುಗಡೆ ಮಾಡಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು‌. ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಜಿಲ್ಲೆಗೆ ಆಗಬೇಕಿರುವ ಕೆಲಸಗಳ ಸಂಬಂಧ ಶಾಸಕರು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ, ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಜಂಬೂರು ಗ್ರಾಮದ ನಿವಾಸಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜಂಬೂರಿನಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಶೀಘ್ರ ಈ ಸಮಸ್ಯೆ ಪರಿಹರಿಸಲಾಗುವುದು ಎಂದರು. ಒಳಚರಂಡಿ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿಲ್ಲ, ಹಾಗಾಗಿ ಸಮಸ್ಯೆ ಆಗಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಮಂತರ್ ಗೌಡ ಅವರು ತಿಳಿಸಿದರು.

ಜಂಬೂರು ಗ್ರಾಮದಲ್ಲಿ ಇನ್ನೂ ಖಾಲಿ ಇರುವ ಮನೆ ಹಾಗೂ ಸಂತ್ರಸ್ತರಲ್ಲದವರೂ ವಾಸ ಮಾಡುತ್ತಿರುವ ಬಗ್ಗೆ ಗಮನ ಸೆಳೆದಾಗ ಈ ಸಂಬಂಧ ಉಪ ವಿಭಾಗಾಧಿಕಾರಿ ಅವರು ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದು ಶಾಸಕರು ವಿವರಿಸಿದರು.

ಐಗೂರಿನ ಬ್ರಿಟಿಷರ ಕಾಲದ ಕಬ್ಬಿಣ ಸೇತುವೆಯನ್ನು ಪರಿಶೀಲನೆ ನಡೆಸಿ ಕೂಡಲೇ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ ನಿಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎನ್. ವೆಂಕಟ ರಾಜ್ ಮಳೆ ಹಾನಿ ಬಗ್ಗೆ ಮಾಹಿತಿ ನೀಡಿ, ಮಳೆ ಹಾನಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಎನ್‌ಡಿಆರ್‌ಎಫ್ ನಿರ್ದೇಶನದಂತೆ ಪರಿಹಾರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಸಚಿವರ ಭೇಟಿ ಸಂದರ್ಭ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಎಸ್‌ಪಿ ಕೆ.ರಾಮರಾಜನ್, ಜಿಪಂ ಸಿಇಓ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಸೀಲ್ದಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಲಕ್ಷ್ಮಣ, ಕೆ.ಬಿ.ಶಾಂತಪ್ಪ, ಕೆ.ಎಂ. ಲೋಕೇಶ್, ಯಾಕೂಬ್ ಸೇರಿದಂತೆ ಮತ್ತಿತತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!