ನಗರದ 31 ವಾರ್ಡ್‌ಗಳಲ್ಲೂ ಸಕಲ ಸಿದ್ಧತೆ । ನಗರದ 136 ಕೊಳವೆ ಬಾವಿಗಳು ಕಾರ್ಯ ನಿರ್ವಹಣೆರಮೇಶ್ ಬಿದರಕೆರೆ
ಬಿಸಿಲು ಜ್ವರ ಏರಿದಂತೆ ಏರುತ್ತಿರುವ ಈ ಹೊತ್ತಲ್ಲಿ 76 ಸಾವಿರ ಜನಸಂಖ್ಯೆ ಇರುವ ಹಿರಿಯೂರು ನಗರದಲ್ಲಿ ಕುಡಿಯುವ ನೀರಿನ ಬವಣೆ ಆಗದಂತೆ ನಗರಸಭೆ ಆಡಳಿತ ಮುನ್ನೆಚ್ಚರಿಕೆ ವಹಿಸಿದೆ. ನಗರದ 31 ವಾರ್ಡ್‌ಗಳಲ್ಲೂ ಸದಸ್ಯರ ಸಹಕಾರ ಪಡೆದು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಇಡೀ ಜಿಲ್ಲೆಯಲ್ಲಿಯೇ ಹಿರಿಯೂರು ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಇಲ್ಲ ಎನ್ನಲಾಗಿದೆ.
ವಿವಿ ಸಾಗರದಿಂದ ಪ್ರತಿ ದಿನವೂ 11 ಎಂಎಲ್‌ಡಿ ನೀರು ಲಕ್ಕವ್ವನಹಳ್ಳಿ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಬರುತ್ತದೆ. ಅಲ್ಲಿಂದ ನೀರು ಶುದ್ಧೀಕರಣಗೊಂಡು ವಾರ್ಡ್‌ಗಳಿಗೆ ತಲುಪುತ್ತಿದೆ. ಮೊದಲೆಲ್ಲಾ 3 ದಿನಕ್ಕೊಮ್ಮೆ ನೀರು ಬಿಡುತ್ತಿದ್ದು ಇದೀಗ ಸಾಕಷ್ಟು ನೀರಿನ ಅನುಕೂಲ ಇರುವುದರಿಂದ ಪ್ರತಿ ದಿನವೂ ಕುಡಿಯುವ ನೀರು ಒದಗಿಸಲಾಗುತ್ತಿದೆ.ವಿವಿ ಸಾಗರ ಜಲಾಷಯ ಭರ್ತಿಯಾದ ಮೇಲೆ ಅಂತರ್ಜಲ ವೃದ್ಧಿಯಾಗಿದ್ದು ನಗರ ಭಾಗದ ಎಲ್ಲಾ 136 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಬೋರ್‌ವೆಲ್‌ಗಳೆಲ್ಲಾ ರೀ ಚಾರ್ಜ್ ಆಗಿರುವುದು ನೀರಿನ ಸಮಸ್ಯೆಯಾಗದ್ದಕ್ಕೆ ಮತ್ತೊಂದು ಕಾರಣವಾಗಿದೆ. ನೆಲದಡಿಯ ಪೈಪ್‌ಲೈನ್ ಗಳೆಲ್ಲಾ ಚನ್ನಾಗಿದ್ದು ಎಲ್ಲಾದರೂ ಪೈಪ್ ಒಡೆದರೆ, ಸೋರಿಕೆ ಕಂಡರೆ ಮಾತ್ರ ಆಗ ಒಂದು ದಿನ ನೀರಿನ ವ್ಯತ್ಯಾಸವಾಗುತ್ತದೆಯೇ ಹೊರತು ನಗರದ ಭಾಗದಲ್ಲಿ ಉಳಿದಂತೆ ನೀರಿನ ಕೊರತೆ ಆಗಿಲ್ಲ. ನಗರ ಭಾಗದಲ್ಲಿ 10ಲಕ್ಷ ಲೀಟರ್‌ನ 5 ಟ್ಯಾoಕ್ ಹಾಗೂ 5 ಲಕ್ಷ ಲೀಟರ್ 5 ಟ್ಯಾoಕ್ ಗಳಿವೆ. ಮೂರು ದಿನಕ್ಕೊಮ್ಮೆ ನೀರಿನ ಪರೀಕ್ಷೆ ಮಾಡಲಾಗುತ್ತಿದ್ದು ಶುದ್ಧ ನೀರು ನೀಡುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಲ ಶುದ್ಧೀಕರಣ ಘಟಕದಲ್ಲಿ ಜಲ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ರೀತಿಯ ಪೌಡರ್‌ಗಳು ಸ್ಟಾಕ್ ಇದ್ದು ಅಲ್ಲೂ ಯಾವುದೇ ರೀತಿಯ ಕೊರತೆ ಇಲ್ಲ. ಈಗಾಗಲೇ ನಗರ ಭಾಗದಲ್ಲಿ ಎಲ್ಲಾ ಕಡೆಯೂ ಕುಡಿಯುವ ನೀರಿನ ಪೈಪ್‌ಲೈನ್ ಇದ್ದು ಹೊಸದಾಗಿ ಬಡಾವಣೆಗಳು ಆಗುವ ಕಡೆಯೂ ನೀರಿನ ಪೈಪ್‌ಲೈನ್ ಮಾಡಲಾಗುತ್ತಿದೆ.
ಕುಡಿಯುವ ನೀರಿನ ಅಭಾವ ಆಗಿಲ್ಲ. ಅಭಾವ ಆಗುವ ಆತಂಕವೂ ಇಲ್ಲ. ನಗರಸಭೆ ಸದಸ್ಯರ, ಅಧ್ಯಕ್ಷರ ಹಾಗೂ ಸಿಬ್ಬಂದಿ ಸಹಕಾರದಿಂದ ವಾರ್ಡ್‌ಗಳ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಬೋರ್‌ವೆಲ್‌ಗಳು ರೀ ಚಾರ್ಜ್ ಆಗಿದ್ದು ಬರುವ ದಿನಗಳಲ್ಲೂ ನೀರಿನ ಅಭಾವ ಆಗಲಾರದು ಎಂದರು.
-ಎ.ವಾಸಿಂ, ನಗರಸಭೆ ಪೌರಾಯುಕ್ತ