ಸಮುದಾಯಕ್ಕೆ ಇದುವೆರಗೂ ಪ್ರಾತಿನಿತ್ಯ ನೀಡಿಲ್ಲ: ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಕಮಾರ್ ಸಂಪುಟದಲ್ಲಿ ಸಚಿವ ಸ್ಥಾನಮಾನ ನೀಡದೆ ವಂಚಿಸಿರುವುದನ್ನು ಖಂಡಿಸಿ ೬ರ ಗುರುವಾರ ಬಂಗಾರಪೇಟೆ ಬಂದ್ ಆಚರಣೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯಲು ನಿರ್ಧರಿಸಲಾಗಿದೆ.
ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವರ್ತಕರು ಪಡಿತರ ವಿತರಕರ ಸಂಘದ, ಆಟೋ ಚಾಲಕರು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಸಭೆ ಸೇರಿ ಶಾಸಕ ನಾರಾಯಣಸ್ವಾಮಿಗೆ ಕಾಂಗ್ರೆಸ್ ಮೋಸ ಮಾಡಿದೆ ಇದರ ವಿರುದ್ಧ ಎಲ್ಲರೂ ಒಂದಾಗಿ ಸೇರಿ ಬಂಗಾರಪೇಟೆ ಬಂದ್ ಮಾಡಲು ತೀರ್ಮಾನಿಸಿದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರವನ್ನು ಅಭಿವೃದ್ದಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಎಸ್‌ಸಿ ಬಲಗೈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆ ಸಮುದಾಯಕ್ಕೆ ಇದುವೆರಗೂ ಪ್ರಾತಿನಿತ್ಯ ನೀಡಿಲ್ಲ, ಈ ಕೊರಗನ್ನು ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವ ಮೂಲಕ ಕಳಂಕ ಮುಕ್ತವಾಗಲಿದೆ ಎಂದು ಭಾವಿಸಲಾಗಿತ್ತು, ಆದರೆ ಇದ್ಯಾವುನ್ನೂ ಲೆಕ್ಕಿಸದೆ ಜಿಲ್ಲೆಗೆ ಒಂದೂ ಮಂತ್ರಿಗಿರಿ ನೀಡದೆ ಕಡೆಗಣಿಸಲಾಗಿದೆ. ಇದನ್ನು ವಿರೋಧಿಸಿ ೬ರಂದು ಗುರುವಾರ ವರ್ತಕರು ಹಾಗೂ ಸಂಘ ಸಂಸ್ಥೆಗಳ ಬಂಗಾರಪೇಟೆ ಬಂದ್ ಆಚರಿಸಲು ನಿರ್ಧರಿಸಿದ್ದು ಅದಕ್ಕೆ ಕಾಂಗ್ರೆಸ್ ಸಹಕಾರ ನೀಡಲಿದೆ ಎಂದರು ತಿಳಿಸಿದರು.
ವರ್ತಕರ ಸಂಘದ ಪರವಾಗಿ ಮಾತನಾಡಿದ ವೈ.ವಿ.ರಮೇಶ್, ಜಿಲ್ಲೆಯ ಜನರ ಭಾವನೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಬೆಲೆ ನೀಡದೆ ಕಡೆಗಣಿಸಿರುವುದನ್ನು ವಿರೋಧಿಸಿ ಗುರುವಾರ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಗಿರೀಶ್, ರೈತ ಸಂಘದ ಮರಗಲ್ ಶ್ರೀನಿವಾಸ್, ಆಟೋ ಚಾಲಕರ ಸಂಘದ ಕೋಳಾಲಪ್ಪ, ದಲಿತ ಮುಖಂಡ ಸಿ.ಜೆ.ನಾಗರಾಜ್, ವಡ್ಡರಹಳ್ಳಿ ಗೋವಿಂದಪ್ಪ, ಎಸ್.ಎ.ಪಾರ್ಥಸಾರಥಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಣಿಂಬೆಲೆ ಶ್ರೀನಿವಾಸ್, ಕೆ.ವಿ.ನಾಗರಾಜ್ ಇತರರು ಇದ್ದರು.