ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ.
ಅತಿ ಅಗತ್ಯವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಯಾವುದೇ ಮಹತ್ವದ ಯೋಜನೆಗಳು ಇಲ್ಲ. ಜಿಲ್ಲೆಯ ಜನತೆ ಸಮುದ್ರ ಆ್ಯಂಬುಲೆನ್ಸ್, ಮುರ್ಡೇಶ್ವರ ಹೊರ ಬಂದರು, ಮತ್ಸಸಂಶೋಧನಾ ಕೇಂದ್ರ ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.ಕರಾವಳಿಯಲ್ಲಿ ಸಮುದ್ರ ಆ್ಯಂಬುಲೆನ್ಸ್, ಮುರ್ಡೇಶ್ವರದಲ್ಲಿ ಹೊರ ಬಂದರು ನಿರ್ಮಾಣ ಹಾಗೂ ಮತ್ಸ್ಯ ಸಂಶೋಧನಾ ಸಂಸ್ಥೆ, ಕಾರವಾರ ಬಂದರು ಹೂಳೆತ್ತುವುದು, ಯಲ್ಲಾಪುರದ ಕಿರವತ್ತಿಯಲ್ಲಿ ನೀರಾವರಿ ಯೋಜನೆ ಬಿಟ್ಟರೆ ಬಜೆಟ್‌ನಲ್ಲಿ ಹೇಳಿದ ಬೇರೆಲ್ಲವೂ ಕಳೆದ ಬಜೆಟ್‌ನಲ್ಲಿ ಮಾಡಿದ ಘೋಷಣೆಯ ಪುನರಾವರ್ತನೆಯಾಗಿದೆ. ಕೇಣಿ ಬಂದರು, ಕಾರವಾರ ಬಂದರಿನ ವಿಸ್ತರಣೆ, ಕಾಸರಕೋಡ ಪಾವಿನಕುರ್ವಾ ಬಂದರು ಬಿಜೆಪಿ ಸರ್ಕಾರ ಇರುವಾಗಲೆ ಘೋಷಣೆಯಾದ ಯೋಜನೆಗಳು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯ ಬಹುಕಾಲದ ಬೇಡಿಕೆ. ಇಲ್ಲಿನ ಜನತೆಯ ಆರೋಗ್ಯಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಕುಮಟಾದಲ್ಲಿ ಆಸ್ಪತ್ರೆಯನ್ನು ಘೋಷಿಸಲಾಗಿತ್ತು. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ಈ ಬಜೆಟ್‌ನಲ್ಲಿ ಈ ವಿಷಯವನ್ನೇ ಪ್ರಸ್ತಾಪಿಸಲಿಲ್ಲ.ಜಿಲ್ಲೆಯಲ್ಲಿ ಧಾರ್ಮಿಕ, ನೈಸರ್ಗಿಕ, ಐತಿಹಾಸಿಕ, ಪೌರಾಣಿಕ ಪ್ರವಾಸಿ ತಾಣಗಳಿವೆ. ಆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಅವುಗಳನ್ನು ಕಲ್ಪಿಸಿ ಪ್ರವಾಸೋದ್ಯಮ ಉತ್ತೇಜಿಸುವ ಯಾವುದೇ ಯೋಜನೆ ಬಜೆಟ್‌ನಲ್ಲಿ ಇಲ್ಲವಾಗಿದೆ.
ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯ ಮೂಲಕ ಯುವ ಜನತೆಯ ಕೈಗೆ ಉದ್ಯೋಗ ನೀಡುವ ಯಾವುದೇ ಘೋಷಣೆ ಇಲ್ಲ. ಇಲ್ಲಿನ ಯುವಕರು ಇಲ್ಲಿ ಉದ್ಯೋಗಕ್ಕೆ ಅವಕಾಶವೇ ಇಲ್ಲದೆ ಕಡಿಮೆ ಸಂಬಳಕ್ಕೆ ಗೋವಾ, ಮುಂಬಯಿ, ಬೆಂಗಳೂರಿಗಳಿಗೆ ತೆರಳುತ್ತಿದ್ದಾರೆ.ಜಿಲ್ಲೆಯ ಬಹುಭಾಗವನ್ನು ಅರಣ್ಯ ಆವರಿಸಿದೆ. ಮಳೆಗಾಲದಲ್ಲಿ ಹಲವು ಗ್ರಾಮಗಳು ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ. ಅಂತಹ ಗ್ರಾಮಗಳಿಗೆ ಶಾಶ್ವತ ಸಂಪರ್ಕ ಕಲ್ಪಿಸುವ ಅವಶ್ಯಕತೆಯನ್ನೂ ಸರ್ಕಾರ ಮನಗಾಣದೆ ಇರುವುದು ವಿಪರ್ಯಾಸವಾಗಿದೆ. ಅಭಿವೃದ್ಧಿ, ಆರ್ಥಿಕ ಚಟುವಟಿಕೆ ಹೆಚ್ಚಳ, ಉದ್ಯೋಗಾವಕಾಶಕ್ಕೆ ಈ ಬಜೆಟ್‌ನಲ್ಲಿ ಅವಕಾಶವೇ ಇಲ್ಲದಂತಾಗಿದೆ.
ಸರ್ಕಾರ ವೈಯಕ್ತಿಕವಾಗಿ ನೀಡಿದ ಗ್ಯಾರಂಟಿಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಬೆಳವಣಿಗೆಗೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಪರಿಣತರು ವಿಶ್ಲೇಷಿಸುತ್ತಿದ್ದಾರೆ.ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ಮಹತ್ವದ ಅಭಿವೃದ್ಧಿ ಯೋಜನೆಯನ್ನು ಘೋಷಿಸಲಾಗಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದೆ ಇರುವುದರಿಂದ ಜಿಲ್ಲೆಗೆ ತುಂಬಾ ಅನ್ಯಾಯವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಗಜಾನನ ಪೈ ಹೇಳುತ್ತಾರೆ.